Vijaypura

ಮಳೆಗಾಗಿ ವಿಜಯಪುರದಲ್ಲಿ ವಿಶೇಷ ಇಂದ್ರಯಾಗ: ರೈತರ ಉಳಿವಿಗಾಗಿ ಪ್ರಾರ್ಥನೆ

Share

ಪ್ರಸಕ್ತ ಸಾಲಿನ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ವಿಜಯಪುರ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭರಣಿ, ರೋಹಿಣಿ ಹಾಗೂ ಮೃಗಶಿರ ಮಳೆಗಳು ನಿರೀಕ್ಷೆಯಂತೆ ಸುರಿಯದ ಕಾರಣ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ನಾಡಿನ ಸಮಸ್ತ ರೈತರ ಉಳಿವು ಹಾಗೂ ಸಕಾಲಕ್ಕೆ ಉತ್ತಮ ಮಳೆಯಾಗಲಿ ಎಂಬ ಸಂಕಲ್ಪದೊಂದಿಗೆ ವಿಶೇಷ ಹೋಮ-ಹವನ ಹಾಗೂ ವೈದಿಕ ಸಂಪ್ರದಾಯದ ಇಂದ್ರಯಾಗವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು. ಈ ಕುರಿತು ಇಲ್ಲಿದೆ ಡಿಟೇಲ್ಸ್…

ವೈದಿಕ ಸಂಪ್ರದಾಯದಲ್ಲಿ ಮಳೆ, ಸಿಡಿಲು ಹಾಗೂ ಸಮೃದ್ಧಿಯ ಅಧಿದೇವತೆ ಎಂದು ಪೂಜಿಸಲ್ಪಡುವ ಇಂದ್ರನನ್ನು ಪ್ರಸನ್ನಗೊಳಿಸಲು ಇಂದ್ರಯಾಗ ನಡೆಸಲಾಗುತ್ತದೆ. ಅದೇ ರೀತಿಯಲ್ಲಿ ಈ ಬಾರಿ ರೈತರ ಹಿತದೃಷ್ಟಿಯಿಂದ ವಿಜಯಪುರ ಜಿಲ್ಲೆಯ ರೈತರು ವಿಶೇಷ ಹೋಮ ಹವನ ಹಾಗೂ ಇಂದ್ರಯಾಗದ ಮೋರೆ ಹೋಗಿದ್ದಾರೆ. ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ-ಹವನ ಮತ್ತು ಇಂದ್ರಯಾಗವನ್ನು ಆಯೋಜಿಸಲಾಗಿತ್ತು. ನೂರಾರು ರೈತರು ಹಾಗೂ ಭಕ್ತರು ಭಾಗವಹಿಸಿ ಉತ್ತಮ ಮಳೆಯಾಗಲೆಂದು ದೇವರಲ್ಲಿ ಪ್ರಾರ್ಥಿಸಿದರು.

ಇನ್ನೂ ಹೋಮ ಹವನದ ಅಂಗವಾಗಿ ಬೃಹತ್ ವೆಂಕಟೇಶ್ವರ ಸ್ವಾಮಿಗೆ ಹಾಲಿನ ಅಭಿಷೇಕ, ನೀರಿನ ಅಭಿಷೇಕ, ಗೋ ಪೂಜೆ, ವಿಶೇಷ ಹೋಮ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ದೇಶದ ಕೃಷಿ ಹಾಗೂ ಜನಜೀವನ ಸುಭಿಕ್ಷವಾಗಿರಲಿ, ರೈತರ ಬದುಕಿನಲ್ಲಿ ಸಂತೋಷ ನೆಲೆಸಲಿ ಎಂದು ಯಾಗದಲ್ಲಿ ವಿಶೇಷ ಸಂಕಲ್ಪ ಮಾಡಲಾಯಿತು. ಆಯೋಜಕರ ಪ್ರಕಾರ, ಭಾರತವು ನಂಬಿಕೆ ಮತ್ತು ಸಂಪ್ರದಾಯಗಳ ನೆಲೆಯಾಗಿದ್ದು, ಹೋಮ- ಹವನಗಳಿಗೆ ವಿಶೇಷ ಮಹತ್ವವಿದೆ. 2006ರಲ್ಲಿ ಇದೇ ದೇವಸ್ಥಾನದಲ್ಲಿ ಇಂದ್ರಯಾಗ ನಡೆದ ಬಳಿಕ ಉತ್ತಮ ಮಳೆಯಾಗಿ ಪ್ರವಾಹದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು ಎಂಬುದನ್ನು ಅವರು ಸ್ಮರಿಸಿದರು. ಈ ಬಾರಿಯೂ ದೇವರ ಕೃಪೆಯಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರ ಸಂಕಷ್ಟ ದೂರವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು. “ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆ ಬರಲಿ, ಅನ್ನದಾತನ ಬದುಕು ಹಸನಾಗಲಿ ಎಂಬ ಉದ್ದೇಶದಿಂದ ಇಂದ್ರಯಾಗ ಹಾಗೂ ವಿಶೇಷ ಹೋಮ ನಡೆಸಿದ್ದೇವೆ ಎಂಬುದು ಆಯೋಜಕರ ಮಾತು.

ಒಟ್ನಲ್ಲಿ ಭರಣಿ, ರೋಹಿಣಿ ಮತ್ತು ಮೃಗಶಿರ ಮಳೆಗಳು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಆತಂಕದಲ್ಲಿರುವ ರೈತರಿಗೆ ಧೈರ್ಯ ತುಂಬುವ ಉದ್ದೇಶದಿಂದ ನಡೆದ ಈ ವಿಶೇಷ ಇಂದ್ರಯಾಗ ಗಮನ ಸೆಳೆದಿದ್ದು, ಶೀಘ್ರವೇ ಮಳೆರಾಯ ಕೃಪೆ ತೋರಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!