ಪಂಚ ನದಿಗಳು ಹರಿದರೂ ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವ ಕಾಲವೊಂದಿತ್ತು. ಆದ್ರೀಗ ಅದೆಲ್ಲವೂ ಬದಲಾಗಿ ಇಡೀ ದೇಶವೇ ವಿಜಯಪುರ ಜಿಲ್ಲೆಯತ್ತ ತಿರುಗು ನೋಡುವಂತೆ ಮಾಡಿರೋದು ನೀರಾವರಿ ಕ್ರಾಂತಿ, ಕೋಟಿ ವೃಕ್ಷ ಅಭಿಯಾನ. ರಾಜ್ಯದಲ್ಲಿಯೇ ಅತೀ ಕಡಿಮೆ ಅರಣ್ಯೀಕರಣ ಹೊಂದಿದ ಅಪಖ್ಯಾತಿಗೆ ವಿಜಯಪುರ ಜಿಲ್ಲೆ ಪಾತ್ರ ಆಗಿತ್ತು. ಇದೀಗ ದೇಶದಲ್ಲೇ ಕಡಿಮೆ ಮಾಲಿನ್ಯ ಹೊಂದಿರುವ ಜಿಲ್ಲೆಯ ಪಟ್ಟಿಯಲ್ಲಿ ಕರ್ನಾಟಕದ ಎರಡು ಜಿಲ್ಲೆ ಸ್ಥಾನ ಪಡೆದಿವೆ. ಅದರಲ್ಲಿ ವಿಜಯಪುರ ಜಿಲ್ಲೆಯೂ ಒಂದು. ಇದಕ್ಕೆ ಕಾರಣ ಕೋಟಿ ವೃಕ್ಷ ಅಭಿಯಾನ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ…


ಹೌದು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳು ತಮ್ಮ ಪ್ರವಚನ ಪ್ರಕೃತಿ, ಪಕ್ಷಿಗಳ ಕುರಿತಾಗಿರುತ್ತಿದ್ದವು. ಸಿದ್ದೇಶ್ವರ ಸ್ವಾಮೀಜಿಗಳಿಗೆ ಅವು ಅಚ್ಚುಮೆಚ್ಚು. ಸಿದ್ದೇಶ್ವರ ಸ್ವಾಮೀಜಿಗಳು ಇಹಲೋಕ ತ್ಯಜಿಸಿದ ಮೇಲೆ ಕರ್ನಾಟಕ ಸರ್ಕಾರ ಸಿದ್ದೇಶ್ವರ ಸ್ವಾಮೀಜಿಗಳ ಹೆಸರಿನಲ್ಲಿ ಅರಣ್ಯ ಬೆಳೆಸುವ ಆಲೋಚನೆಗೆ ಮುಂದಾಗಿತ್ತು. ಮಮದಾಪೂರ ಗ್ರಾಮದಲ್ಲಿ ಈಗಾಗಲೇ ಅರಣ್ಯೀಕರಣ ಆರಂಭವಾಗಿತ್ತು. ಸಚಿವ ಎಂ ಬಿ ಪಾಟೀಲ್ ಅವರು ಮಮದಾಪುರ ಅರಣ್ಯ ಪ್ರದೇಶಕ್ಕೆ ಸಿದ್ದೇಶ್ವರ ಸ್ವಾಮೀಜಿಗಳ ಹೆಸರಿಡುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದರು. ಮಮದಾಪುರ ಅರಣ್ಯ ಪ್ರದೇಶ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಜೀವವೈವಿಧ್ಯ ಪರಂಪರೆ ತಾಣವೆಂದು ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಸುಮಾರು 1494 ಎಕರೆ ವಿಸ್ತೀರ್ಣದ ವಿಶಾಲವಾದ ಅರಣ್ಯ ಹಾಗೂ ಜೀವವೈವಿಧ್ಯ ತಾಣವಾಗಿ ರೂಪಗೊಳ್ತಿದೆ. ಹಲವು ಜಾತಿಯ ಸಸ್ಯಗಳು ಗಿಡಗಳಾಗಿ ಬೆಳೆಯುತ್ತಿವೆ. ಪಶು ಪಕ್ಷಿಗಳ ತಾಣವಾಗಿದೆ. ವಿಜಯಪುರ ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆ. ಆಲಮಟ್ಟಿ ಕೆಬಿಜೆಎನ್ಎಲ್ (KBJNL) ಅರಣ್ಯ ವಿಭಾಗ ಕೈ ಜೋಡಿಸಿವೆ. ಕೂಡಗಿ ಎನ್ ಟಿಪಿಸಿ ಮಮದಾಪುರ ಗ್ರಾಮದ ಅರಣ್ಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿದ್ದು ಹಸಿರಿನಿಂದ ಕಂಗೊಳಿಸಲು ಪ್ರಮುಖ ಕಾರಣವಾಗಿದೆ…
ಮಮದಾಪುರ ಅರಣ್ಯ ಪ್ರದೇಶವು ಇಂದು ದಟ್ಟವಾದ ಕಾಡಾಗಿ ಪರಿವರ್ತನೆಯಾಗುತ್ತಿದ್ದು, ಇಲ್ಲಿ ವಿವಿಧ ತಳಿಯ ಸಸ್ಯ ಸಂಪತ್ತನ್ನು ಪೋಷಿಸಲಾಗುತ್ತಿದೆ. ಮಾವು, ಬಿದಿರು, ಬೇವು, ಹುಣಸೆ, ಸೇರಿದಂತೆ ವಿವಿಧ ತಳಿಯ ಗಿಡಗಳು ಇಲ್ಲಿ ನಳನಳಿಸುತ್ತಿವೆ. ಪಕ್ಷಿಗಳ ಚಿಲಿಪಿಲಿ ಕಲರವ, ಪಶು ಪಕ್ಷಿಗಳ ಆಶ್ರಯ ತಾಣವಾಗಿದೆ. ಅರಣ್ಯ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಜೇನು ಕೃಷಿ ಯನ್ನು ಕೂಡ ಮಾಡಲಾಗುತ್ತಿದೆ. ಸಚಿವ ಎಂ. ಬಿ. ಪಾಟೀಲ್ ಅವರ ನೀರಾವರಿ ಕಾರ್ಯಗಳ ಜೊತೆಗೆ, ಅವರ ದೂರದೃಷ್ಟಿಯ ಕೋಟಿ ವೃಕ್ಷ ಅಭಿಯಾನ ಪರಿಕಲ್ಪನೆಯು ವಿಜಯಪುರ ಜಿಲ್ಲೆಯ ಚಿತ್ರಣವನ್ನೇ ಬದಲಿಸಿದೆ. ಒಮ್ಮೆ ಧೂಳಿನಿಂದ ಕೂಡಿದ್ದ ವಿಜಯಪುರ ಜಿಲ್ಲೆ ಇಂದು ಧೂಳಾಪುರದಿಂದ ಮುಕ್ತವಾಗಿ, ದೇಶದಲ್ಲೇ ಅತ್ಯಂತ ಕಡಿಮೆ ಮಾಲಿನ್ಯವಿರುವ ಪ್ರದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಾಯು ಗುಣಮಟ್ಟ ಸೂಚ್ಯಂಕ (AQI) ದಲ್ಲಿ ದೇಶದಲ್ಲಿಯೇ ವಿಜಯಪುರ ಜಿಲ್ಲೆ AQI 16 ಹಾಗೂ ಚನ್ನರಾಯಪಟ್ಟಣ AQI 17 ನೇ ಸ್ಥಾನ ಪಡೆದು ಗಮನ ಸೆಳೆದಿವೆ…
ವಿಜಯಪುರ ಜಿಲ್ಲೆಯಲ್ಲಿ ಸಿದ್ದೇಶ್ವರ ಸ್ವಾಮೀಜಿ ಅರಣ್ಯ ಪ್ರದೇಶಗಳಿದ್ದು, ವಿಜಯಪುರ ಜಿಲ್ಲೆಯಲ್ಲಿ ಹಲವು ಸ್ವಯಂ ಸೇವಾ ಸಂಸ್ಥೆಗಳು, ನಾಗರೀಕರು ಹಾಗೂ ಕೋಟಿ ವೃಕ್ಷ ಅಭಿಯಾನ ತಂಡ ಅರಣ್ಯೀಕರಣಕ್ಕೆ ಕೈಜೋಡಿಸಿದ್ದು ಇದೀಗ ಮೊದಲ ಹಂತದ ಫಲಿತಾಂಶ ದೊರೆತಿದೆ. ವಿಜಯಪುರ ಗ್ರೀನ್ ಸಿಟಿ ಆಗಲು ಅರಣ್ಯ ಇಲಾಖೆಯೊಂದಿಗೆ ನಾಗರಿಕರು ಇನ್ನಷ್ಟು ಕೈ ಜೋಡಿಸಬೇಕಿದೆ…
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
