Dharwad

ಸುಪ್ರೀಂ ‘ಸರೆಂಡರ್’ ಆದೇಶ: ಫುಲ್ ಟೆನ್ಷನ್‌ನಲ್ಲಿ ಮನೆಗೆ ಮರಳಿದ ವಿನಯ್ ಕುಲಕರ್ಣಿ!

Share

ಧಾರವಾಡದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಪಡಿಸಿ ಎರಡು ವಾರಗಳಲ್ಲಿ ಶರಣಾಗುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದ್ದು, ತೀರ್ಪು ಪ್ರಕಟವಾದ ಬೆನ್ನಲ್ಲೇ ವಿನಯ್ ಕುಲಕರ್ಣಿ ನಿವಾಸದಲ್ಲಿ ರಾಜಕೀಯ ಹಾಗೂ ಕಾನೂನು ಚಟುವಟಿಕೆಗಳು ಗರಿಗೆದರಿವೆ.

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿ ಜಾಮೀನು ಮಂಜೂರು ಮಾಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಹಾಗೂ ಯೋಗೀಶ್ ಗೌಡ ಸಹೋದರ ಗುರುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ, ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೆ, ವಿನಯ್ ಕುಲಕರ್ಣಿ ಸೇರಿದಂತೆ ಪ್ರಕರಣದ 12 ಮಂದಿ ಆರೋಪಿಗಳು ಮುಂದಿನ 14 ದಿನಗಳೊಳಗೆ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಸುಪ್ರೀಂ ತೀರ್ಪಿನಿಂದ ಶಿಕ್ಷೆಗೆ ಇದ್ದ ತಡೆ ತೆರವಾಗಿದ್ದು, ನಿಯಮಗಳ ಪ್ರಕಾರ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವೂ ಅನರ್ಹಗೊಳ್ಳುವ ಆತಂಕ ಎದುರಾಗಿದೆ.

ಇತ್ತ ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆಯೇ ಡೈರಿಯಿಂದ ಡಿಫೆಂಡರ್ ಕಾರಿನಲ್ಲಿ ನೇರವಾಗಿ ತಮ್ಮ ನಿವಾಸಕ್ಕೆ ಆಗಮಿಸಿದ ವಿನಯ್ ಕುಲಕರ್ಣಿ ತೀವ್ರ ಒತ್ತಡದಲ್ಲಿ ಕಂಡುಬಂದರು. ವಿಷಯ ತಿಳಿದು ಕೈ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರ ನಿವಾಸದತ್ತ ದೌಡಾಯಿಸುತ್ತಿದ್ದರೂ, ಸದ್ಯ ಯಾರ ಭೇಟಿಗೂ ಕುಟುಂಬಸ್ಥರು ಅವಕಾಶ ನೀಡಿಲ್ಲ. ಕಳೆದ ಅರ್ಧ ಗಂಟೆಯಿಂದ ವಿನಯ್ ಕುಲಕರ್ಣಿ ತಮ್ಮ ವಕೀಲರೊಂದಿಗೆ ಗೌಪ್ಯವಾಗಿ ಸುದೀರ್ಘ ಚರ್ಚೆ ನಡೆಸುತ್ತಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಸದ್ಯಕ್ಕೆ ಸುಪ್ರೀಂ ಬಾಗಿಲು ಬಂದ್ ಆಗಿದ್ದರೂ, ಹೈಕೋರ್ಟ್‌ನಲ್ಲಿ ಬಾಕಿ ಇರುವ ಮೇಲ್ಮನವಿಯ ತುರ್ತು ವಿಚಾರಣೆಗೆ ಮನವಿ ಸಲ್ಲಿಸಿ ಖುಲಾಸೆಗೊಳ್ಳುವ ಮೂಲಕ ರಿಲೀಫ್ ಪಡೆಯುವ ಒಂದೇ ಅವಕಾಶ ವಿನಯ್ ಕುಲಕರ್ಣಿ ಮುಂದಿದೆ.

Tags:

error: Content is protected !!