ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ರೈತರು ಬೆಳೆದ ಅಪಾರ ಪ್ರಮಾಣದ ಕಬ್ಬು ಮತ್ತು ಭತ್ತದ ಬೆಳೆ ನಾಶವಾಗಿದೆ. ಈ ಕುರಿತು ಶಾಸಕರ ನಿರ್ಲಕ್ಷ್ಯ ಖಂಡಿಸಿ ಸ್ಥಳೀಯ ಮುಖಂಡರು ಆಕ್ರೋಶ ಹೊರಹಾಕಿದ್ದು, ಶನಿವಾರದೊಳಗೆ ಕಬ್ಬು ಕಟಾವು ಮಾಡದಿದ್ದರೆ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಖಾನಾಪುರ ತಾಲೂಕಿನ ನಿಲಾವಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಜಳೆ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ 9 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ರೈತ ರಾವಜಿ ಮಷ್ಣು ಪಾಟೀಲ್ ಅವರ ಹೊಲದಲ್ಲಿದ್ದ ಸುಮಾರು 50 ಟನ್ ಕಬ್ಬು ಹಾಗೂ ರೈತ ಮಷ್ಣು ಗಾವಡಾ ಅವರು ಕಟಾವು ಮಾಡಿಟ್ಟಿದ್ದ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ತುಳಿದು ನಾಶಪಡಿಸಿವೆ. ನೇರ್ಸಾ ಭಾಗದಿಂದ ಬಂದ ಈ ಆನೆಗಳ ಹಿಂಡಿನ ದಾಳಿಯಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಈ ಹಿಂದೆ ಶಾಸಕ ವಿಠ್ಠಲ್ ಹಲಗೇಕರ್ ಅವರು ಕಾಂಜಳೆ ಭಾಗದ ಕಬ್ಬನ್ನು ಮೊದಲು ಕಟಾವು ಮಾಡಿಸುವುದಾಗಿ ಭರವಸೆ ನೀಡಿದ್ದರೂ, ಈಗ ಆನೆಗಳು ಅರ್ಧದಷ್ಟು ಕಬ್ಬನ್ನು ತಿಂದು ಹಾಕಿದ್ದರೂ ಶಾಸಕರು ಇತ್ತ ಸುಳಿದಿಲ್ಲ ಎಂದು ನಿಲಾವಂಡೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ವಿನಾಯಕ್ ಮುತಗೇಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಶನಿವಾರದೊಳಗೆ ಲೈಲಾ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಕಟಾವು ಮಾಡುವ ತಂಡಗಳನ್ನು ಕಳುಹಿಸದಿದ್ದರೆ, ಕಾರ್ಖಾನೆಯ ಗೇಟ್ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
