ಕಳೆದ ಎರಡು-ಮೂರು ವರ್ಷಗಳಿಂದ ಖಾನಾಪೂರ ತಾಲೂಕಿನಲ್ಲಿ ಮರಳು ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಸಾವಿರಾರು ಕಾರ್ಮಿಕರು ಹಾಗೂ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮರಳು ವ್ಯಾಪಾರ ಸ್ಥಗಿತಗೊಂಡ ಪರಿಣಾಮ ಕಟ್ಟಡ ನಿರ್ಮಾಣ, ಇಟ್ಟಿಗೆ ಉದ್ಯಮ, ಸಾರಿಗೆ ಸೇರಿದಂತೆ ಹಲವು ಉಪವ್ಯವಹಾರಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ಖಾನಾಪೂರ ಪಟ್ಟಣದ ಮಾರುಕಟ್ಟೆಯ ಆರ್ಥಿಕ ಚಟುವಟಿಕೆಗಳಿಗೂ ಹೊಡೆತ ಬಿದ್ದಿದೆ. ಆದ್ದರಿಂದ ತಾಲೂಕಿನಲ್ಲಿ ತಕ್ಷಣ ಮರಳು ವ್ಯಾಪಾರ ಆರಂಭಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಪಟ್ಟಣದಲ್ಲಿರುವ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಂನಂತಹ ಪತ್ರಿಕಾಗೋಷ್ಠಿ ನಡೆಸಿ ಪ್ರತಿಭಟನೆಯ ರೂಪುರೇಷೆ ಪ್ರಕಟಿಸಿದರು.
ನಾಳೆ ಸೋಮವಾರ, ನವೆಂಬರ್ 16ರಂದು ಬೆಳಿಗ್ಗೆ 10 ಗಂಟೆಗೆ ಖಾನಾಪೂರದ ಶಿವಸ್ಮಾರಕ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಮನವಿ ನೀಡಲಾಗುವುದು ಎಂದು ತಿಳಿಸಿದರು.
ಮನವಿ ಸಲ್ಲಿಸಿದ ಏಳು ದಿನಗಳೊಳಗೆ ತಾಲೂಕಿನಲ್ಲಿ ಮರಳು ವ್ಯಾಪಾರ ಆರಂಭಿಸಲು ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮರಳು ವ್ಯಾಪಾರ ಸ್ಥಗಿತದಿಂದ ಜನಜೀವನಕ್ಕೆ ತೊಂದರೆ ಈ ಸಂಧರ್ಭದಲ್ಲಿ ಖಾನಾಪುರ ತಾಲೂಕು ಬಾರ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ಘಾಡಿ ಅವರು ಮಾತನಾಡಿ ಮರಳು ವ್ಯಾಪಾರವು ತಾಲೂಕಿನ ಅನೇಕ ಕುಟುಂಬಗಳ ಜೀವನಾಧಾರವಾಗಿದೆ. ಆದರೆ ಖಾನಾಪುರ ತಾಲೂಕಿನಲ್ಲಿ ಮಾತ್ರ ಈ ವ್ಯಾಪಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದೇಕೆ? ತಾಲೂಕಿನ ಹೊರಭಾಗಗಳಲ್ಲಿ ಮರಳು ವ್ಯಾಪಾರ ನಡೆಯುತ್ತಿರುವಾಗ ಖಾನಾಪುರದಲ್ಲೇ ಏಕೆ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ ಈಗಾಗಲೇ ಉದ್ಯೋಗಾವಕಾಶಗಳು ಕಡಿಮೆಯಾಗಿದ್ದು, ಬರ ಪರಿಸ್ಥಿತಿಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮರಳು ವ್ಯಾಪಾರ ಸ್ಥಗಿತಗೊಂಡಿರುವುದರಿಂದ ಕಟ್ಟಡ ನಿರ್ಮಾಣ, ಇಟ್ಟಿಗೆ ಉದ್ಯಮ ಸೇರಿದಂತೆ ಹಲವು ಉದ್ಯೋಗಗಳು ನಷ್ಟದ ಹಾದಿಯಲ್ಲಿವೆ.
ಮರಳು ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬುದು ಸಂಬಂಧಪಟ್ಟ ಇಲಾಖೆಯ ವಾದವಾಗಿದ್ದರೆ, ಜಾಂಬೋಟಿ ಭಾಗದಲ್ಲಿ ನಡೆಯುತ್ತಿರುವ ಖನಿಜ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲವೇ? ಎಲ್ಲ ಉದ್ಯಮಗಳಿಗೂ ಒಂದೇ ರೀತಿಯ ನಿಯಮಗಳನ್ನು ಅನ್ವಯಿಸಬೇಕು ಎಂದು ಅವರು ಪ್ರಶ್ನಿಸಿದರು.
ತಾಲೂಕಿನ ಎಲ್ಲ ಮರಳು ವ್ಯಾಪಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸೋಮವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕೆಂದು ಮರಳು ಅಶೋಸಿಯೇಶನ ಅಧ್ಯಕ್ಷ ಪ್ರಮೋದ ಸುತಾರ ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಖಾನಾಪೂರ ತಾಲೂಕು ಬಾರ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ಘಾಡಿ, ಖಾನಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾಹುತ, ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ. ನಾಡಗೌಡ, ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡ ಗೋಪಾಳರಾವ್ ಪಾಟೀಲ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮಹಾದೇವ ಘಾಡಿ, ಸಾಯಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಪಿ. ಪಾಟೀಲ, ಕಾಂಗ್ರೆಸ ಮುಖಂಡರಾದ ಪ್ರಸಾದ ಪಾಟೀಲ, ರೋಹಿತ್ ಪೋಳ, ಯುವ ಕಾಂಗ್ರೆಸ್ ಅಧ್ಯಕ್ಷ ಇಸಾಕಖಾನ ಪಠಾಣ, ತಾಲೂಕು ಮರಳು ಅಸೋಸಿಯೇಷನ್ ಪಧಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
