ಸ್ನೇಹ ಅನ್ನೋದು ನಂಬಿಕೆ ಮೇಲೆ ನಿಂತಿರುವ ಸಂಬಂಧ.ಆದ್ರೆ ಅದೇ ಸ್ನೇಹ ಹಣದ ವಿಚಾರಕ್ಕೆ ದ್ವೇಷವಾಗಿ ಬದಲಾದ್ರೆ ಏನಾಗುತ್ತೆ.ಇಲ್ಲಿ ನಾಲ್ವರು ಸ್ನೇಹಿತರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ.ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ವಿಚಾರದಲ್ಲಿ ಇದೀಗ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ.ಹಣದ ವಿಚಾರಕ್ಕೆ ಸ್ನೇಹಿತನನ್ನೇ ಮುಗಿಸಿದ್ರಾ ಆ ನಾಲ್ವರು.ಪೊಲೀಸರ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಯಲಾಗಿದೆಯಾ.ಆದ್ರೆ ಈ ಪ್ರಕರಣದಲ್ಲಿ ಇನ್ನೂ ಒಂದು ದೊಡ್ಡ ನಿಗೂಢತೆ ಇದೆ.ಅದೇ ನಾಪತ್ತೆಯಾಗಿರುವ ವ್ಯಕ್ತಿಯ ಮೃತದೇಹ.ಇನ್ನೂ ಪತ್ತೆಯಾಗಿಲ್ಲ ಅನ್ನೋದು ಹಾಗಾದ್ರೆ ಹನುಮಂತಪ್ಪನಿಗೆ ನಿಜಕ್ಕೂ ಏನಾಯ್ತು.ಆ ನಾಲ್ವರು ಸ್ನೇಹಿತರು ಮಾಡಿದ್ದೇನು ಈ ಕುರಿತು ಒಂದು ಇಲ್ಲಿದೆ ನೋಡಿ
ಹೌದು ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಹನುಮಂತಪ್ಪ ಎಂಬ ವ್ಯಕ್ತಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ.ಕಳೆದ ತಿಂಗಳ 28ರಂದು ಹನುಮಂತಪ್ಪ ಕಾಣೆಯಾಗಿದ್ದಾನೆ ಎಂದು ಕುಟುಂಬಸ್ಥರು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.ಆದ್ರೆ ದೂರು ನೀಡಿ ಬರೋಬ್ಬರಿ 20 ದಿನ ಕಳೆದರೂ ಹನುಮಂತಪ್ಪನ ಸುಳಿವೇ ಸಿಕ್ಕಿರಲಿಲ್ಲ.ಇತ್ತ ಕುಟುಂಬಸ್ಥರು ತಮ್ಮ ಮನೆಯ ವ್ಯಕ್ತಿ ಯಾವಾಗ ವಾಪಸ್ ಬರುತ್ತಾನೆ ಎಂದು ಕಾಯುತ್ತಿದ್ದರೆ, ಅತ್ತ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸ್ನೇಹಿತರ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.ಹನುಮಂತಪ್ಪನ ಸ್ನೇಹಿತರಾದ ಉಪೇಂದ್ರ, ಶಶಿಕುಮಾರ್, ಮಲ್ಲಿಕಾರ್ಜುನ್ ಹಾಗೂ ಗಂಗಾಧರ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಮೊಬೈಲ್ ಟವರ್ ಲೊಕೇಶನ್ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ ಎನ್ನಲಾಗಿದೆ.ಹಣದ ವಿಚಾರಕ್ಕೆ ಹನುಮಂತಪ್ಪನನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.ಆದ್ರೆ ಇಲ್ಲಿ ದೊಡ್ಡ ಪ್ರಶ್ನೆಯೊಂದು ಎದುರಾಗಿದೆ.ಕೊಲೆ ಮಾಡಿರುವುದಾಗಿ ಹೇಳಲಾಗ್ತಿದೆ.. ಆದರೆ ಹನುಮಂತಪ್ಪನ ಮೃತದೇಹ ಮಾತ್ರ ಎಲ್ಲಿದೆ ಅನ್ನೋದೇ ನಿಗೂಢವಾಗಿದೆ
ನಾಪತ್ತೆಯಾದ ಹನುಮಂತಪ್ಪ ಬದುಕಿದ್ದಾನೋ ಇಲ್ಲವೋ ಎಂಬ ಆತಂಕ ಕುಟುಂಬಸ್ಥರನ್ನು ಕಾಡುತ್ತಿದೆ.ಒಂದು ವೇಳೆ ಕೊಲೆಯಾಗಿದ್ದರೆ ಮೃತದೇಹವನ್ನಾದರೂ ಪತ್ತೆ ಹಚ್ಚಿ ನಮಗೆ ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.ಇನ್ನೊಂದೆಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ವಿಚಾರಣೆ ಮುಂದುವರಿಸಿದ್ದಾರೆ.ಆರೋಪಿಗಳು ನೀಡಿರುವ ಮಾಹಿತಿಯ ಆಧಾರದ ಮೇಲೆ ಹನುಮಂತಪ್ಪನ ಮೃತದೇಹ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.ಕೊಲೆ ನಡೆದಿರುವ ಸ್ಥಳ ಯಾವುದು.ಮೃತದೇಹವನ್ನು ಎಲ್ಲಿ ಬಚ್ಚಿಡಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರಾ.ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಒಟ್ಟಿನಲ್ಲಿ ಹಣದ ವಿಚಾರಕ್ಕೆ ಸ್ನೇಹವೇ ದ್ವೇಷವಾಗಿ ಬದಲಾಗಿದೆಯಾ ಎಂಬ ಅನುಮಾನ ಮೂಡಿದೆ.ನಾಲ್ವರು ಸ್ನೇಹಿತರ ವಿಚಾರಣೆ ನಡೆಯುತ್ತಿದ್ದು, ಹನುಮಂತಪ್ಪನ ಮೃತದೇಹ ಪತ್ತೆಯಾಗದಿರುವುದು ಪ್ರಕರಣವನ್ನು ಮತ್ತಷ್ಟು ನಿಗೂಢವಾಗಿಸಿದೆ.ಕುಟುಂಬಸ್ಥರಿಗೆ ತಮ್ಮ ಮನೆಯ ವ್ಯಕ್ತಿಯ ಕೊನೆಯ ಸುಳಿವಾದರೂ ಸಿಗುತ್ತಾ.ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಬಯಲಾಗುತ್ತಾ.ಅನ್ನೋದನ್ನ ಕಾದು ನೋಡಬೇಕಿದೆ
