ನೀವೇನಾದ್ರೂ ಹಾಫ್ ಹೆಲ್ಮೆಟ್ ಹಾಕೊಂಡು ಬೈಕ್ ಓಡಿಸ್ತಾ ಇದ್ದೀರಾ? ಅಥವಾ ಟ್ರಾಫಿಕ್ ಜಾಮ್ ತಪ್ಪಿಸಿಕೊಳ್ಳೋಕೆ ಫುಟ್ಪಾತ್ ಮೇಲೆ ಬೈಕ್ ಹತ್ತಿಸ್ತೀರಾ? ಹಾಗಿದ್ರೆ ಇನ್ಮುಂದೆ ಹುಷಾರಾಗಿರಿ. ಹೊಸ ವರ್ಷದಿಂದ ಬೈಕ್ ಸವಾರರಿಗೆ ರಾಜ್ಯ ಸರ್ಕಾರ ಭರ್ಜರಿ ಶಾಕ್ ನೀಡಲು ಮುಂದಾಗಿದ್ದು, ಸಂಚಾರ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಸಾರಿಗೆ ಇಲಾಖೆ ಸಜ್ಜಾಗಿದೆ. ಏನದು ಹೊಸ ರೂಲ್ಸ್? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ರಾಜ್ಯಾದ್ಯಂತ ‘ಹಾಫ್ ಹೆಲ್ಮೆಟ್’ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಾರಿಗೆ ಸಚಿವ ಬೈರತಿ ಸುರೇಶ್ ಅವರು, ಹೊಸ ವರ್ಷದಿಂದಲೇ ಈ ಕಠಿಣ ನಿಯಮಗಳು ಜಾರಿಗೆ ಬರಲಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ಹೆಚ್ಚಾಗಿ ತಲೆಗೆ ಗಂಭೀರ ಪೆಟ್ಟು ಬೀಳುತ್ತಿರುವುದರಿಂದ, ಕಳಪೆ ಗುಣಮಟ್ಟದ ಹಾಫ್ ಹೆಲ್ಮೆಟ್ಗಳನ್ನು ತಯಾರಿಸುವ ಫ್ಯಾಕ್ಟರಿಗಳನ್ನು ಬಂದ್ ಮಾಡಲು ಹಾಗೂ ಈ ಸಂಬಂಧ ಕಾನೂನು ಪರಿಶೀಲನೆ ನಡೆಸಿ ಕಾಯ್ದೆ ರೂಪಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಇನ್ನೊಂದೆಡೆ, ಪಾದಾಚಾರಿಗಳಿಗೆ ಮೀಸಲಿರುವ ಫುಟ್ಪಾತ್ಗಳ ಮೇಲೆ ಬೈಕ್ ಚಲಾಯಿಸುವ ಪುಂಡರಿಗೆ ಬ್ರೇಕ್ ಹಾಕಲು ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಈ ಹಿಂದೆ ಇದ್ದ 1,000 ರೂಪಾಯಿ ದಂಡವನ್ನು ಬರೋಬ್ಬರಿ 5,000 ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದು, ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ 5 ಸಾವಿರ ರೂಪಾಯಿ ಹಾಗೂ ಎರಡನೇ ಬಾರಿ ಸಿಕ್ಕಿಬಿದ್ದರೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಮೂರನೇ ಬಾರಿಯೂ ಫುಟ್ಪಾತ್ ಮೇಲೆ ಬೈಕ್ ಚಲಾಯಿಸಿ ಕಾನೂನು ಉಲ್ಲಂಘಿಸಿದರೆ, ಅಂತಹ ಸವಾರರ ವಾಹನವನ್ನೇ ಮುಟ್ಟುಗೋಲು ಹಾಕಿಕೊಳ್ಳಲು (ಸೀಜ್ ಮಾಡಲು) ಸರ್ಕಾರದ ಅನುಮೋದನೆಯೊಂದಿಗೆ ಕಠಿಣ ಕಾನೂನು ಜಾರಿಗೆ ತರಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
