Ballari

ಬಳ್ಳಾರಿಯಲ್ಲಿ ಆಂಧ್ರ ಸಚಿವ ನಾರಾ ಲೋಕೇಶ್’ಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

Share

ಬಳ್ಳಾರಿ ಜಿಲ್ಲೆಯ ಕುಡುತಿನಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕನ್ನಡ ಮತ್ತು ತೆಲುಗು ಜನರು ಒಂದೇ ಕುಟುಂಬದವರಂತೆ ಇದ್ದು, ದಕ್ಷಿಣ ಭಾರತದ ರಾಜ್ಯಗಳು ಒಟ್ಟಾಗಿ ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದು ಆಶಿಸಿದರು.

ಬಳ್ಳಾರಿ ಜಿಲ್ಲೆಯ ಕುಡುತಿನಿಗೆ ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ ಆಂಧ್ರಪ್ರದೇಶದ ಐಟಿ ಹಾಗೂ ಶಿಕ್ಷಣ ಸಚಿವ ನಾರಾ ಲೋಕೇಶ್ ಅವರಿಗೆ ಟಿಡಿಪಿ ಮತ್ತು ಕಮ್ಮವಾರಿ ಅಭಿಮಾನವೃಂದದಿಂದ ಭವ್ಯ ಸ್ವಾಗತ ದೊರೆಯಿತು. ಪಟಾಕಿ ಸಿಡಿಸಿ ಮತ್ತು ಕ್ರೇನ್ ಮೂಲಕ ಬೃಹತ್ ಹಾರವನ್ನು ಹಾಕಿ ಅಭಿಮಾನಿಗಳು ಸಚಿವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕನ್ನಡ ನೆಲದಲ್ಲಿದ್ದರೂ ಆಂಧ್ರಪ್ರದೇಶದಂತಹ ಅನುಭವವಾಗುತ್ತಿದೆ. ಇಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಆಂಧ್ರ ಮೂಲದ ಜನರು ವಾಸಿಸುತ್ತಿದ್ದು, ಕನ್ನಡ ಮತ್ತು ತೆಲುಗು ಭಾಷಿಗರು ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ, ಅಣ್ಣ-ತಮ್ಮಂದಿರಂತೆ ಇದ್ದೇವೆ ಎಂದು ಬಣ್ಣಿಸಿದರು.

ಮುಂದುವರಿದು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಮತ್ತು ಎನ್. ಚಂದ್ರಬಾಬು ನಾಯ್ಡು ಅವರು ಬೆಂಗಳೂರು ಹಾಗೂ ಹೈದರಾಬಾದ್ ನಗರಗಳನ್ನು ಅಭಿವೃದ್ಧಿಪಡಿಸಿದ ಹಾದಿಯನ್ನು ಸ್ಮರಿಸಿದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ಸೇರಿದಂತೆ ಎಲ್ಲಾ ದಕ್ಷಿಣ ಭಾರತದ ರಾಜ್ಯಗಳು ಒಟ್ಟಾಗಿ ಕೈಜೋಡಿಸಿ ಪ್ರಗತಿಯ ಹಾದಿಯಲ್ಲಿ ಸಾಗಬೇಕು ಎಂದು ಆಶಿಸಿದರು. ಅಲ್ಲದೆ, ತಮ್ಮ ತಂದೆ ಕಷ್ಟದ ಕಾಲದಲ್ಲಿ ಜೈಲಿಗೆ ಹೋದಾಗ ಈ ಭಾಗದ ಜನರು ತೋರಿದ ಬೆಂಬಲವನ್ನು ಸ್ಮರಿಸಿ, ತಮ್ಮ ಕುಟುಂಬದ ಪರವಾಗಿ ಸಮಸ್ತ ಜನತೆಗೆ ಅನಂತ ಧನ್ಯವಾದಗಳನ್ನು ಅರ್ಪಿಸಿದರು.

Tags:

error: Content is protected !!