kagwad

ಕಾಗವಾಡ ತಾಲೂಕಿನ ಶೇಡಬಾಳದಲ್ಲಿ ಎಸ್.ವೈ. ನಾಂದ್ರೆ ಪುಣ್ಯಸ್ಮರಣೆ

Share

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಗುರಿಯಿಟ್ಟುಕೊಂಡು, ಸನ್ಮತಿ ಶಿಕ್ಷಣ ಸಮಿತಿ ಸ್ಥಾಪಿಸಲು ಮುತುವರ್ಜಿ ವಹಿಸಿದ ಹಾಗೂ ಇದೇ ವಿದ್ಯಾಲಯದಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಶಿಕ್ಷಣ ಪ್ರೇಮಿ ಎಸ್.ವೈ. ನಾಂದ್ರೆ ಇವರ 57ನೇ ಪುಣ್ಯತಿಥಿ ಆಚರಿಸಲಾಯಿತು.

ಮಂಗಳವಾರದಂದು ಸನ್ಮತಿ ವಿದ್ಯಾಲಯದ ಸಭಾಭವನದಲ್ಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿದವರು ಹಾಗೂ ಮುಖ್ಯಾಧಿಪಕರಾಗಿ ಆದರ್ಶ ಸೇವೆ ಸಲ್ಲಿಸಿದ ದಿವಂಗತ ಎಸ್.ವೈ. ನಾಂದ್ರೆ ಇವರ 57ನೇ ಪುಣ್ಯತಿಥಿ ನಿಮಿತ್ತ ವಿದ್ಯಾಲಯದ ವಿದ್ಯಾರ್ಥಿಗಳಿಂದ ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗಳನ್ನು ವೀಕ್ಷಿಸಿದ ಸಂಸ್ಥೆಯ ಹಿರಿಯ ನಿರ್ದೇಶಕರು ಹಾಗೂ ಹೆಸರಾಂತ ವೈದ್ಯರಾದ ಡಾ. ಅಶೋಕ್ ಪಾಟೀಲ್ ಮಾತನಾಡಿ, “ದಿವಂಗತ ಎಸ್.ವೈ. ನಾಂದ್ರೆ ಇವರು ಶಿಕ್ಷಣ ಸಂಸ್ಥೆ ಸ್ಥಾಪಿಸಲು ಬಹಳಷ್ಟು ಶ್ರಮಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಆಸೆ ಇಟ್ಟುಕೊಂಡು ಪ್ರಯತ್ನಿಸಿದರು. ಬಳಿಕ ಇದೇ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿದರು. ಇವರು ಒಬ್ಬ ಆದರ್ಶ ಗುರುಗಳು” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶೇಡಬಾಳ ಅರ್ಬನ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಅಶೋಕ್ ಎದಂಗೌಡರ್, ಪ್ರಧಾನ ಗುರುಗಳಾದ ಶ್ರೀಮತಿ ಎಂ.ಎನ್. ಕಾಳಿನಟ್ಟಿ ಹಾಗೂ ಸಹಶಿಕ್ಷಕರು, ವಿದ್ಯಾರ್ಥಿಗಳು ಬಿಡಿಸಿದ ಚುಕ್ಕೆ ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆಯ ಕೃತಿಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿಕೊಂಡರು. ದಿವಂಗತ ಎಸ್.ವೈ. ನಾಂದ್ರೆ ಇವರ ಪ್ರತಿಮೆಗೆ ಗಣ್ಯರಿಂದ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ ಪುಣ್ಯತಿಥಿ ಆಚರಿಸಲಾಯಿತು.

ಚುಕ್ಕೆ ರಂಗೋಲಿ ಸ್ಪರ್ಧೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿನಿಯರಾದ ಅಕ್ಷತಾ ಬಡಿಗೇರ್, ಶೃತಿ ದಳವಾಯಿ, ಛಾಯಾ ಲೊಂಡೆ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವರ್ಷಾ ಮುಜಾವರ್, ಕಲ್ಯಾಣಿ ಗಸ್ತಿ, ಕೀರ್ತಿ ವಡ್ರಾಳೆ ಇವರಿಗೆ ಅತಿಥಿಗಳಿಂದ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ಶ್ರೀಮತಿ ಎಂ.ಎನ್. ಕಾಳಿನಟ್ಟಿ ಸ್ವಾಗತಿಸಿದರು. ಹಿರಿಯ ಶಿಕ್ಷಕರಾದ ಎಸ್.ಬಿ. ಇರಾಜ, ಎಸ್.ಡಿ. ಮುತಾಲಿಕ್, ಎ.ಕೆ. ಪಾಟೀಲ್, ಎಚ್.ಪಿ. ನಾಯ್ಕ್, ಜಿ.ಎನ್. ಹೆಬ್ಬಾಳೆ, ಎಸ್.ಪಿ. ಅಸೋದೆ, ಎಸ್.ಎಸ್. ಅಂಕಲ್ ಕೋಪೆ, ಪಿ.ಎ. ಕುರಂಡ್ವಾಡೆ, ಶ್ರೀಮತಿ ಎಂ.ಎಸ್. ಮುತುವಲ್ಲಿ ಸೇರಿದಂತೆ ಅನೇಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Tags:

error: Content is protected !!