kagwad

ಕಾಗವಾಡ: ಗಡಿಭಾಗದಲ್ಲಿ ಭರದಿಂದ ಸಾಗಿದ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿ

Share

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ರಸ್ತೆ ಮಾರ್ಗದ ಮೂಲಕ ಸಂಪರ್ಕಿಸುವ ಬೆಳಗಾವಿ–ಸಾಂಗ್ಲಿ ಮಧ್ಯದ ಕಾಗವಾಡ–ಕಲಾದಗಿ ಎಸ್‌ಎಚ್–55 ರಾಜ್ಯ ಹೆದ್ದಾರಿಯ ಕಾಗವಾಡದ ರಾಣಿ ಚೆನ್ನಮ್ಮ ವೃತ್ತದಿಂದ ರಾಜ್ಯದ ಗಡಿಯವರೆಗೆ ಸುಮಾರು ₹5 ಕೋಟಿ ವೆಚ್ಚದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಈಗಾಗಲೇ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಗವಾಡ ಮಾರ್ಗದ ರಸ್ತೆಯನ್ನು ಅಗಲೀಕರಣಗೊಳಿಸಿ ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂದು ಕಳೆದ ಹಲವು ವರ್ಷಗಳಿಂದ ಪ್ರಯಾಣಿಕರು, ಸಾರ್ವಜನಿಕರು ಹಾಗೂ ವಾಹನ ಚಾಲಕರು ಬೇಡಿಕೆ ಸಲ್ಲಿಸುತ್ತಿದ್ದರು. ಈ ಬೇಡಿಕೆಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರು ₹5 ಕೋಟಿ ವಿಶೇಷ ಅನುದಾನ ಮಂಜೂರುಗೊಳಿಸಿದ್ದಾರೆ.

ನೂತನ ರಸ್ತೆ ನಿರ್ಮಾಣದಿಂದ ಏಕಕಾಲಕ್ಕೆ ನಾಲ್ಕು ವಾಹನಗಳು ಸಂಚರಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದರಿಂದ ಪ್ರಯಾಣಿಕರು ಹಾಗೂ ವಾಹನ ಸವಾರರಲ್ಲಿ ಸಂತಸ ಮೂಡಿದೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಪ್ರತಿದಿನ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಸುಮಾರು 500 ಬಸ್‌ಗಳು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು, ಈ ಹಿಂದೆ ರಸ್ತೆ ಹದಗೆಟ್ಟಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು. ಮಹಾರಾಷ್ಟ್ರದ ಗಡಿ ಭಾಗದಲ್ಲಿ ರಸ್ತೆ ಸುಧಾರಣೆಯಾಗಿದ್ದರೂ ನಮ್ಮ ಭಾಗದ ರಸ್ತೆ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಇದೀಗ ಕಾಗವಾಡ ಭಾಗದಲ್ಲಿಯೂ ಗುಣಮಟ್ಟದ ರಸ್ತೆ ನಿರ್ಮಾಣವಾಗುತ್ತಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಥಣಿ ಹಾಗೂ ಕಾಗವಾಡ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಮಗದುಮ್ ಅವರು ರಸ್ತೆ ಕಾಮಗಾರಿ ಕುರಿತು ಮಾಹಿತಿ ನೀಡುತ್ತಾ, “ಕಳೆದ ಹಲವು ವರ್ಷಗಳಿಂದ ರಸ್ತೆ ನಿರ್ಮಾಣಕ್ಕೆ ಸಾರ್ವಜನಿಕರಿಂದ ಬೇಡಿಕೆ ಇತ್ತು. ಇದನ್ನು ಗಮನಿಸಿದ ಶಾಸಕ ರಾಜು ಕಾಗೆ ಅವರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ವಿಶೇಷ ಅನುದಾನ ಮಂಜೂರುಗೊಳಿಸಿದ್ದಾರೆ. ಇದೀಗ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು” ಎಂದು ತಿಳಿಸಿದರು.

ಕಾಗವಾಡದ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಹಾಗೂ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜ್ಯೋತಿಕುಮಾರ್ ಪಾಟೀಲ್ ಮಾತನಾಡಿ, “ಶಾಸಕರು ಹಾಗೂ ಸಚಿವರು ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ ಅನುದಾನ ಮಂಜೂರುಗೊಳಿಸಿ ರಸ್ತೆ ಅಗಲೀಕರಣ ಮಾಡಿಸಿದ್ದಾರೆ. ನಾಲ್ಕು ವಾಹನಗಳು ಏಕಕಾಲಕ್ಕೆ ಸಂಚರಿಸುವ ವ್ಯವಸ್ಥೆ ಕಲ್ಪಿಸಿರುವುದರಿಂದ ಕಾಗವಾಡದ ಗ್ರಾಮಸ್ಥರು ಹಾಗೂ ಪ್ರಯಾಣಿಕರ ಪರವಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ” ಎಂದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಎಂ.ಎಸ್. ಮಗದುಮ್, ಸಹಾಯಕ ಅಭಿಯಂತರ ರಾಹುಲ್ ಹಿರೇಗನ್ನವರ್, ಸಹಾಯಕ ಅಭಿಯಂತರ ಸುಭಾಷ ಸಜ್ಜನ, ಜ್ಯೋತಿಕುಮಾರ್ ಪಾಟೀಲ್, ಅಥಣಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸೌರಭ ಪಾಟೀಲ್, ಪಟ್ಟಣ ಪಂಚಾಯಿತಿ ಸದಸ್ಯ ಶಾಂತಿನಾಥ ಕರವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗುಣಮಟ್ಟದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರರಾದ ಜಯಂತ್ ಶೆಟ್ಟಿ ಹಾಗೂ ಅಪ್ಪಾಸಾಹೇಬ ಅವತಾಡೆ ಅವರು ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Tags:

error: Content is protected !!