Belagavi

ಬೆಳಗಾವಿ ನ್ಯಾಯಾಧೀಶರ ವಿರುದ್ಧ ವಕೀಲರ ಆಕ್ರೋಶ: ಕಲಾಪ ಬಹಿಷ್ಕರಿಸಿ ಪ್ರತಿಭಟನೆ

Share

ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಕೀಲ ವಿರೋಧಿ ವರ್ತನೆ ಖಂಡಿಸಿ ಬೆಳಗಾವಿ ಬಾರ್ ಅಸೋಸಿಯೇಷನ್ ಪ್ರತಿಭಟನೆ ನಡೆಸಿದೆ. ಕಲಾಪ ಬಹಿಷ್ಕರಿಸಿದ 3,000ಕ್ಕೂ ಹೆಚ್ಚು ವಕೀಲರು, ಸಂಬಂಧಿತ ನ್ಯಾಯಾಧೀಶರನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಹೈಕೋರ್ಟ್‌ಗೆ ಆಗ್ರಹಿಸಿದ್ದಾರೆ.
ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಏಕಪಕ್ಷೀಯ ವರ್ತನೆಯನ್ನು ಖಂಡಿಸಿ ಬೆಳಗಾವಿ ವಕೀಲರ ಸಂಘವು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕಿರಿಯ ಹಾಗೂ ಹಿರಿಯ ವಕೀಲರಿಗೆ ಸೂಕ್ತ ಗೌರವ ನೀಡದಿರುವುದು, ಸಾಕ್ಷಿಗಳ ವಿಚಾರಣೆ ವೇಳೆ ವಕೀಲರಿಗೆ ಅನಗತ್ಯ ಕಿರುಕುಳ ನೀಡುವುದು ಮತ್ತು ತರಬೇತಿ ನಿರತ ಪಿಎಸ್‌ಐಗಳ ಸಭೆಗಾಗಿ ವಕೀಲರನ್ನು ಆಸನಗಳಿಂದ ಎಬ್ಬಿಸಿದಂತಹ ಘಟನೆಗಳು ವಕೀಲರ ಕೆಂಗಣ್ಣಿಗೆ ಗುರಿಯಾಗಿವೆ. ಸುಮಾರು ಒಂದು ವರ್ಷದಿಂದ ಈ ರೀತಿಯ ದುರ್ವರ್ತನೆ ಮುಂದುವರಿದಿದ್ದು, ಬೆಳಗಾವಿ ನ್ಯಾಯಾಲಯದ ಇತಿಹಾಸದಲ್ಲೇ ಇಂತಹ ಸನ್ನಿವೇಶ ಎಂದೂ ಎದುರಾಗಿರಲಿಲ್ಲ ಎಂದು ವಕೀಲರ ಸಂಘದ ಪ್ರಮುಖರಾದ ಬಿ. ಜೆ. ಗಂಗಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ನ್ಯಾಯಾಧೀಶರ ನಿಲುವು ಹಾಗೂ ನಡವಳಿಕೆ ಕುರಿತು ಈಗಾಗಲೇ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಜಡ್ಜ್ (PDJ) ಅವರಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಧನಾತ್ಮಕ ಬದಲಾವಣೆ ಕಂಡುಬಂದಿಲ್ಲ. ಉನ್ನತ ನ್ಯಾಯಾಲಯದ ನಿಯಮಾವಳಿಗಳನ್ನು ಬೆಟ್ಟು ಮಾಡಿ ತೋರಿಸಿದರೂ ನ್ಯಾಯಾಧೀಶರು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ್ತು ಆಡಳಿತಾತ್ಮಕ ನ್ಯಾಯಾಧೀಶರು ತಕ್ಷಣವೇ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ಸಂಬಂಧಪಟ್ಟ ನ್ಯಾಯಾಧೀಶರನ್ನು ಬೆಳಗಾವಿಯಿಂದ ತಕ್ಷಣ ವರ್ಗಾವಣೆ ಮಾಡಬೇಕು ಎಂದು ವಕೀಲರು ಪಟ್ಟು ಹಿಡಿದಿದ್ದಾರೆ. ಮುಂದಿನ ಹೋರಾಟದ ರೂಪುರೇಷೆಗಳನ್ನು ಶೀಘ್ರದಲ್ಲೇ ಸಭೆ ನಡೆಸಿ ತೀರ್ಮಾನಿಸುವುದಾಗಿ ಸಂಘ ಸ್ಪಷ್ಟಪಡಿಸಿದೆ.

ಈ ವೇಳೆ ಬಾರ್ ಸದಸ್ಯರು ಮತ್ತು ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Tags:

error: Content is protected !!