Ballari

ಗ್ರಾಮಸಭೆಯಲ್ಲೇ ಅಧಿಕಾರಿಗಳಿಗೆ ಶಾಕ್; ಬಾಟಲ್‌ನಲ್ಲಿ ಕಲುಷಿತ ನೀರು ತಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

Share

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯು ತೀವ್ರ ವಾಗ್ವಾದ ಹಾಗೂ ಆಕ್ರೋಶಕ್ಕೆ ಸಾಕ್ಷಿಯಾಗಿದೆ. ಕುಡಿಯುವ ನೀರಿನಲ್ಲಿ ಹುಳುಗಳು ಪತ್ತೆಯಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಸಭೆಗೆ ಬಾಟಲ್‌ನಲ್ಲಿ ಕಲುಷಿತ ನೀರನ್ನು ತಂದು ಅಧಿಕಾರಿಗಳ ಮುಂದೆಯೇ ಪ್ರದರ್ಶಿಸಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಜನರ ಆಕ್ರೋಶಕ್ಕೆ ಅಧಿಕಾರಿಗಳು ಹೈರಾಣಾಗಿದ್ದಾರೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗ್ರಾಮಸಭೆಯು ಆರಂಭದಿಂದಲೇ ಬಿಗುವಿನ ವಾತಾವರಣಕ್ಕೆ ತಿರುಗಿತು. ಗ್ರಾಮದಲ್ಲಿ ಹಲವು ದಿನಗಳಿಂದ ಸರಬರಾಜಾಗುತ್ತಿರುವ ಕುಡಿಯುವ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ನೀರಿನಲ್ಲಿ ಹುಳುಗಳು ಈಜಾಡುತ್ತಿವೆ. ಈ ಗಂಭೀರ ಸಮಸ್ಯೆಯನ್ನು ಅಧಿಕಾರಿಗಳ ಕಣ್ಣಿಗೆ ಕಟ್ಟುವಂತೆ ತೋರಿಸಲು ಗ್ರಾಮಸ್ಥರು ಹುಳುಗಳಿರುವ ನೀರನ್ನು ಬಾಟಲ್‌ನಲ್ಲಿ ಸಂಗ್ರಹಿಸಿ ನೇರವಾಗಿ ಗ್ರಾಮಸಭೆಗೆ ತಂದಿದ್ದರು. ಸಭೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳ ಟೇಬಲ್ ಮೇಲೆ ಬಾಟಲ್ ಇಟ್ಟು, “ಇದೇನಾ ನೀವು ಜನರಿಗೆ ಕೊಡುತ್ತಿರುವ ಕುಡಿಯುವ ನೀರು?” ಎಂದು ತರಾಟೆಗೆ ತೆಗೆದುಕೊಂಡರು.

ಗ್ರಾಮಸ್ಥರ ಈ ದಿಢೀರ್ ಆಕ್ರೋಶದಿಂದ ಕಕ್ಕಾಬಿಕ್ಕಿಯಾದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ರಾಹುಲ್ ಅವರನ್ನು ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರಶ್ನಿಸಿದರು. “ಮೊದಲು ಅಧಿಕಾರಿಗಳೇ ಈ ನೀರನ್ನು ಕುಡಿದು ತೋರಿಸಿ, ಆಗ ಇದರ ನೈಜ ಸ್ಥಿತಿ ನಿಮಗೆ ಗೊತ್ತಾಗುತ್ತದೆ. ಈ ಕಲುಷಿತ ನೀರನ್ನು ಕುಡಿದು ಜನರಿಗೆ ಆರೋಗ್ಯದಲ್ಲಿ ಅನಾಹುತ ಉಂಟಾದರೆ ಹೊಣೆ ಯಾರು?” ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಎಇಇ ರಾಹುಲ್, ಮೇ ತಿಂಗಳಲ್ಲೇ ನೀರಿನಲ್ಲಿ ಹುಳು ಬರುತ್ತಿರುವ ಸಮಸ್ಯೆ ತಮ್ಮ ಗಮನಕ್ಕೆ ಬಂದಿತ್ತು ಎಂದು ಒಪ್ಪಿಕೊಂಡರು.

ಮುಂದುವರಿದು, ಕೂಡಲೇ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ (ಲ್ಯಾಬ್) ಕಳುಹಿಸಿ ಗುಣಮಟ್ಟ ಪರಿಶೀಲಿಸುವುದಾಗಿ ಮತ್ತು ವಾಟರ್ ಟ್ಯಾಂಕ್ ಹಾಗೂ ಪೈಪ್‌ಲೈನ್ ಸ್ವಚ್ಛಗೊಳಿಸಿ ಶುದ್ಧ ಕುಡಿಯುವ ನೀರು ಪೂರೈಸುವ ಭರವಸೆ ನೀಡಿದರು. ಕೇವಲ ನೀರು ಮಾತ್ರವಲ್ಲದೆ, ಗ್ರಾಮದ ಚರಂಡಿ ವ್ಯವಸ್ಥೆ, ಹದಗೆಟ್ಟ ರಸ್ತೆಗಳು ಹಾಗೂ ನರೇಗಾ (MGNREGA) ಕೆಲಸಗಳ ಬಾಕಿ ಸಮಸ್ಯೆಗಳಿಗೂ ಕೂಡಲೇ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದರು.

Tags:

error: Content is protected !!