ಖಾನಾಪುರ ತಾಲ್ಲೂಕಿನ ಹತ್ತರವಾಡ್ ಗ್ರಾಮದ ಸುಪುತ್ರ ಹಾಗೂ ಹಲ್ಲೆಹೋಳ್ ಶಾಲೆಯ ಮುಖ್ಯೋಪಾಧ್ಯಾಯರಾದ ಶಿಕ್ಷಕ-ಕವಿ ಪರಶರಾಮ್ ಎಂ. ಶಿಂಧೆ ಅವರ ನೂತನ ಗೀತಾಸಂಪದೆಯ ಲೋಕಾರ್ಪಣಾ ಸಮಾರಂಭವು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ಅದ್ಧೂರಿಯಾಗಿ ನೆರವೇರಿತು. ಗಣೇಶೋತ್ಸವದ ಪವಿತ್ರ ಮುಹೂರ್ತದಲ್ಲಿ ಬಿಡುಗಡೆಯಾದ ಈ ಆಲ್ಬಮ್ನಲ್ಲಿ ಗಣೇಶಗೀತೆ, ಭಾವಗೀತೆ, ಭಕ್ತಿಗೀತೆ ಹಾಗೂ ಶ್ರಮಜೀವಿಗಳ ಬದುಕನ್ನು ಬಿಂಬಿಸುವ ಕೃತಿಗಳು ರಸಿಕರ ಮನಸೂರೆಗೊಂಡಿವೆ.


ಖಾನಾಪುರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಈ ಅರ್ಥಪೂರ್ಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಗಣತ ಶಿಕ್ಷಣಾಧಿಕಾರಿ ಮಂಜುನಾಥ ಹಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಸುಭಾಷ್ ದೇಶಪಾಂಡೆ ಹಾಗೂ ಸಾಹಿತಿ ವಾಸುದೇವ ಚೌಗುಲೆ ಉಪಸ್ಥಿತರಿದ್ದು, ಕವಿ ಪರಶರಾಮ್ ಶಿಂಧೆ ಅವರ ಸಾಹಿತ್ಯಕ ಹಾಗೂ ಸಾಮಾಜಿಕ ಒಡನಾಟವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಶಿಕ್ಷಕ ವೃತ್ತಿಯ ಜತೆಗೆ ಸಮಾಜದ ವಿವಿಧ ಆಯಾಮಗಳನ್ನು ತಮ್ಮ ಲೇಖನಿಯ ಮೂಲಕ ತೆರೆದಿಡುತ್ತಿರುವ ಶಿಂಧೆ ಅವರ ಈ ನೂತನ ಗೀತಾಸಂಪದೆಯು ಕಲೆ ಮತ್ತು ಸಂಸ್ಕೃತಿಗೆ ಹೊಸ ಆಯಾಮ ಒದಗಿಸಲಿದೆ ಎಂದು ವಕ್ತಾರರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಮುಖವಾಗಿ ತಬಲಾ ವಾದಕ ಮೇಜರ್ ಸುಪೇದಾರ್ ಕೃಷ್ಣ ಸುತಾರ್ ಹಾಗೂ ಸಂಗೀತ ನಿರ್ದೇಶಕ ಜಯಕರ್ ಜಾದವ್ ಸೇರಿದಂತೆ ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಆರಂಭವಾದ ಈ ಸಮಾರಂಭವು ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಶಿಕ್ಷಣದೊಂದಿಗೆ ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತಿರುವ ಇಂತಹ ಸೃಜನಶೀಲ ಪ್ರಯತ್ನಗಳು ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿದಾಯಕವಾಗಿರಲಿವೆ.
