ಕೇಂದ್ರ ವಲಯದ ಬೆಂಗಳೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗಣೇಶ ಹಬ್ಬದ ಸಿದ್ಧತೆಗಳ ಕುರಿತು ಮಹತ್ವದ ಸಭೆ ನಡೆದಿದೆ. ಎಡಿಜಿಪಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಹಬ್ಬದ ಶಾಂತಿಯುತ ಆಚರಣೆ ಹಾಗೂ ಬಿಗಿ ಭದ್ರತೆಯ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.


ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರು ಕೇಂದ್ರ ವಲಯದ ಬೆಂಗಳೂರು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಗಣೇಶ ಚತುರ್ಥಿಯ ಅಂಗವಾಗಿ ಪೂರ್ವಭಾವಿ ಉನ್ನತ ಮಟ್ಟದ ಸಭೆ ನಡೆಸಿದರು. ಮುಂಬರುವ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೈಗೊಳ್ಳಬೇಕಾದ ಕಾವಲು ವ್ಯವಸ್ಥೆ, ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳು ಹಾಗೂ ಸಂಚಾರ ನಿರ್ವಹಣೆಯ ಕುರಿತು ಅವರು ಹಿರಿಯ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಸಮುದಾಯಗಳ ನಡುವೆ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರೊಂದಿಗೆ ಶಾಂತಿ ಸಭೆಗಳನ್ನು ನಡೆಸುವಂತೆ ಸೂಚಿಸಿದ ಅವರು, ಈ ಸಭೆಯಲ್ಲಿ ಪೊಲೀಸ್ ಇಲಾಖೆಯ ವಿವಿಧ ಹಂತದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಪ್ರಮುಖ ಭದ್ರತಾ ರೂಪರೇಷೆಗಳ ಬಗ್ಗೆ ಚರ್ಚಿಸಿದರು.

