Vijaypura

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 12 ಎಕರೆ ಕಬ್ಬು ಬೆಳೆ ಭಸ್ಮ

Share

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 12 ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮವಾಗಿರುವ ಘಟನೆ ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ವೆ ನಂ. 209 ಮತ್ತು 210ರ ಜಮೀನಿನಲ್ಲಿ ಬೆಳೆದಿದ್ದ ಪಾರ್ವತಿ ಮಡಿವಾಳಪ್ಪ ಪುರದಾಳ, ಸಿದ್ದಲಿಂಗಪ್ಪ ಬಸರಿ, ಗುರುಪ್ಪ ಬಸರಿ, ಸದಾನಂದ ಬಸರಿ ಹಾಗೂ ಮಡಿವಾಳಪ್ಪ ಬಸರಿ ಅವರಿಗೆ ಸೇರಿದ ಸುಮಾರು 12 ಎಕರೆ ಕಬ್ಬಿನ ಬೆಳೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ.

ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ನಾಶವಾಗಿದೆ. ಬೆಂಕಿಯ ತೀವ್ರತೆಗೆ ಕಂಗಾಲಾದ ಗ್ರಾಮಸ್ಥರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸೇರಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ಹಾನಿಗೊಳಗಾದ ರೈತರ ಜಮೀನುಗಳನ್ನು ಪರಿಶೀಲಿಸಿ, ರೈತರಿಗೆ ಸಾಂತ್ವನ ಹೇಳಿದರು. ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮಶ್ಯಾಕ್ ಸಾಬ್ ಚೌಧರಿ, ಮುಖಂಡರಾದ ಉಮೇಶ್ ಇಂಗಳಗಿ, ರಾಜುಗೌಡ ಪುರದಾಳ, ಸಾಹೇಬಗೌಡ ಪುರದಾಳ, ವಿವೇಕಾನಂದ ಬಸರಿ, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ರಾಮನಗೌಡ ರಾಂಪೂರ, ಕಲಕೇರಿ ಪೊಲೀಸ್ ಠಾಣೆಯ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!