ಕೇವಲ 7 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರುವ ಅವಶ್ಯಕತೆ ಇತ್ತಾ ಎಂದು ಸಚಿವ ಎಂ.ಬಿ. ಪಾಟೀಲ್ ಲೇವಡಿ ಮಾಡಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಅವರ ಫೋನ್ ಟ್ಯಾಪಿಂಗ್ ಆರೋಪದ ವಿಚಾರವಾಗಿಯೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಸಮಸ್ಯೆಗಳನ್ನು ಪ್ರಧಾನಿಗಳ ಮುಂದೆಯೇ ತೆರೆದಿಟ್ಟಿದ್ದಾರೆ. ಬರ ಪರಿಹಾರ ನೀಡಬೇಕು, ಕಬ್ಬು ಬೆಳೆಗಾರರಿಗೆ ನ್ಯಾಯಯುತ ಎಂಎಸ್ಪಿ ನೀಡಬೇಕು, ಮೆಟ್ರೋ ಯೋಜನೆಯಲ್ಲಿ ರಾಜ್ಯದ ಕೊಡುಗೆ ಏನು ಎಂಬುದನ್ನು ಪರಿಗಣಿಸಬೇಕು ಹಾಗೂ ರೈತರಿಗೆ ಬರ ಪರಿಹಾರವಾಗಿ 22 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ ಎಂದರು. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬೇಡಿ, ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಮುಖ್ಯಮಂತ್ರಿಗಳು ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ. ಕರ್ನಾಟಕಕ್ಕೆ ಬರಬೇಕಿದ್ದ ಕೈಗಾರಿಕೆಗಳನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಲಾಗುತ್ತಿದೆ. ಎಲ್ಲ ರಾಜ್ಯಗಳನ್ನೂ ಸಮಾನವಾಗಿ ನೋಡಬೇಕು. ಯಾವ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸೂಕ್ತ ಅರ್ಹತೆ ಮತ್ತು ಆಸಕ್ತಿ ಇದೆಯೋ ಅಲ್ಲಿಗೆ ಕೈಗಾರಿಕೆಗಳು ಬರಬೇಕು. ಆದರೆ ಪಕ್ಷದ ಆಧಾರದ ಮೇಲೆ ಅಭಿವೃದ್ಧಿ ಮಾಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮೆಟ್ರೋ ಯೋಜನೆಯಲ್ಲಿ ಕೇಂದ್ರದ ಕೊಡುಗೆ ಕುರಿತು ಸ್ಪಷ್ಟನೆ ನೀಡಿದ ಸಚಿವರು ಕೇಂದ್ರ ಸರ್ಕಾರದ ಸಹಕಾರದಿಂದಲೇ 100 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣ ವಾಗಿದೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್, ಮೆಟ್ರೋ ಯೋಜನೆಯಲ್ಲಿ ರಾಜ್ಯದ ಪಾಲು, ಕೇಂದ್ರದ ಪಾಲು ಹಾಗೂ ಮೂರನೇ ಒಂದು ಭಾಗದಷ್ಟು ಸಾಲದ ಪಾಲು ಇರುತ್ತದೆ. ಸಾಲದ ಹಣವನ್ನು ಕೇಂದ್ರ ಸರ್ಕಾರ ನೀಡಿದ ಅನುದಾನ ಎಂದು ಹೇಳುವುದು ಸರಿಯಲ್ಲ. ಆ ಸಾಲವನ್ನು ಸಂಬಂಧಿಸಿದ ನಿಗಮವೇ ಮರುಪಾವತಿ ಮಾಡುತ್ತದೆ. ನಮ್ಮ ಸಾಲವನ್ನು ನಾವೇ ತೀರಿಸುತ್ತೇವೆ, ಅವರ ಸಾಲವನ್ನು ಅವರೇ ತೀರಿಸುತ್ತಾರೆ ಎಂದು ತಿರುಗೇಟು ನೀಡಿದರು. ಕೇಂದ್ರ ಸರ್ಕಾರ ನಿಜವಾಗಿಯೂ ಕರ್ನಾಟಕದ ಬಗ್ಗೆ ಕಾಳಜಿ ಹೊಂದಿದ್ದರೆ 22 ಸಾವಿರ ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಲಿ, ಕಬ್ಬು ಬೆಳೆಗಾರರ ಎಂಎಸ್ಪಿ ಸಮಸ್ಯೆ ಬಗೆಹರಿಸಲಿ ಹಾಗೂ ಸೆಮಿಕಂಡಕ್ಟರ್ ಕೈಗಾರಿಕೆಗಳಿಗೆ ಅಗತ್ಯ ಅನುದಾನ ನೀಡಲಿ ಎಂದು ಸವಾಲು ಹಾಕಿದರು. ಅಪ್ಪರ್ ಭದ್ರಾ ಯೋಜನೆಗೆ 5 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರೂ ಈವರೆಗೆ ಬಿಡುಗಡೆ ಮಾಡಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿಯೂ ಈ ಬಗ್ಗೆ ಹೇಳಿದ್ದರೂ ಹಣ ನೀಡಿಲ್ಲ. ಇದಕ್ಕಿಂತ ಬೇರೆ ಯಾವ ಉದಾಹರಣೆ ಬೇಕು ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಫೋನ್ ಟ್ಯಾಪಿಂಗ್ ಆರೋಪ: ಮೋದಿ ವಿರುದ್ಧ ಕಿಡಿಕಾರಿದ ಸಚಿವರು ರಾಹುಲ್ ಗಾಂಧಿ ಅವರಿಗೆ ಫೋನ್ ಟ್ಯಾಪಿಂಗ್ನ ಅನುಭವ ಆಗಿರಬೇಕು. ಇವಿಎಂ ಟ್ಯಾಂಪರಿಂಗ್ ಮಾಡುವವರಿಗೆ ಫೋನ್ ಟ್ಯಾಪಿಂಗ್ ಮಾಡುವುದು ದೊಡ್ಡ ವಿಷಯವೇನಲ್ಲ ಎಂದು ವ್ಯಂಗ್ಯವಾಡಿದರು. ಇಡಿ, ಸಿಬಿಐ ಹಾಗೂ ಐಟಿ ಇಲಾಖೆಗಳು ಬಿಜೆಪಿ ಅಧೀನದ ಕಂಪನಿಗಳಂತೆ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಫೋನ್ ಟ್ಯಾಪಿಂಗ್ ಆರೋಪ ಕೇಳಿಬಂದಿರುವುದು ಅಚ್ಚರಿಯ ಸಂಗತಿಯಲ್ಲ. ಈ ವಿಚಾರವಾಗಿ ಸಮಗ್ರ ತನಿಖೆಯಾಗಬೇಕು. ಯಾರೊಬ್ಬರ ವೈಯಕ್ತಿಕ ಗೌಪ್ಯತೆಗೆ ಧಕ್ಕೆ ಉಂಟಾಗಬಾರದು ಎಂದು ಹೇಳಿದರು. ಪ್ರಧಾನಿ ಮೋದಿ ಅವರ ಜನಪ್ರಿಯತೆ ಕುಸಿಯುತ್ತಿದೆ. ಜನರು ಅವರ ಬಗ್ಗೆ ಹತಾಶರಾಗಿದ್ದಾರೆ. ಮೋದಿ ಅವರ ಡೌನ್ಫಾಲ್ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಕೃತ್ಯಗಳ ಮೂಲಕ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ರಾಹುಲ್ ಗಾಂಧಿ ಅವರು ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಹತಾಶೆಗೊಂಡು ಅವರ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
