Vijaypura

ಸಿದ್ದಸಿರಿ ಸೊಸೈಟಿ ಮೇಲೆ ಇಡಿ, ಐಟಿ ದಾಳಿ ವದಂತಿ; ಯತ್ನಾಳ್ ಗರಂ!

Share

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಂಸ್ಥಾಪನೆಯ ಸಿದ್ದಸಿರಿ ಮಲ್ಟಿ ಸ್ಟೇಟ್ ಸಹಕಾರಿ ಸೊಸೈಟಿ ಮೇಲೆ ಇಡಿ ಹಾಗೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ವದಂತಿ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ವದಂತಿಗಳಿಗೆ ಸ್ವತಃ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟನೆ ನೀಡಿದ್ದು, ಯಾವುದೇ ದಾಳಿ ನಡೆದಿಲ್ಲ, ಇದೆಲ್ಲವೂ ರಾಜಕೀಯ ವಿರೋಧಿಗಳು ಮಾಡುತ್ತಿರುವ ಸುಳ್ಳು ಅಪಪ್ರಚಾರ ಎಂದು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ತಮ್ಮ ವಿರುದ್ಧ ಭ್ರಷ್ಟಾಚಾರ ಸಾಬೀತುಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಬಹಿರಂಗ ಸವಾಲು ಹಾಕಿದ್ದಾರೆ. ಸೊಸೈಟಿಯ ಗ್ರಾಹಕರ ಹಣ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿರುವ ಯತ್ನಾಳ್, ಈ ವಿವಾದದ ಹಿಂದೆ ರಾಜ್ಯ ಬಿಜೆಪಿಯ ನಾಯಕರೊಬ್ಬರ ಕೈವಾಡವಿದೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ. ಈ ಕುರಿತು ಯತ್ನಾಳ್ ಏನೆಲ್ಲಾ ಹೇಳಿದ್ದಾರೆ ನೋಡೋಣ ಈ ವರದಿಯಲ್ಲಿ.

ಸಿದ್ದಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಮೇಲೆ ಇಡಿ ಹಾಗೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ವದಂತಿಗಳಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೆರೆ ಎಳೆದಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೊಸೈಟಿ ಮೇಲೆ ಯಾವುದೇ ದಾಳಿ ನಡೆದಿಲ್ಲ. ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಿಂದ ಕೆಲವು ದಾಖಲೆಗಳು ಹಾಗೂ ಆಡಿಟರ್ ಸಹಿಗೆ ಸಂಬಂಧಿಸಿದಂತೆ ಮಾಹಿತಿ ಕೇಳಲಾಗಿತ್ತು. ಇದಕ್ಕೆ ಸೆಪ್ಟೆಂಬರ್ 4ರಂದೇ ಇ-ಮೇಲ್ ಮೂಲಕ ಸಮರ್ಪಕ ಉತ್ತರ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೇವಲ 5 ಲಕ್ಷ ರೂಪಾಯಿ ಬಂಡವಾಳದಿಂದ ಆರಂಭವಾದ ಸಿದ್ದಸಿರಿ ಸಹಕಾರಿ ಸಂಘವು 6,140 ಕೋಟಿ ರೂಪಾಯಿ ವ್ಯವಹಾರ ನಡೆಸುವ ಮಟ್ಟಕ್ಕೆ ಬೆಳೆದಿದೆ. ರಾಜ್ಯ ಸಹಕಾರಿ ವ್ಯಾಪ್ತಿಯಿಂದ ಕೇಂದ್ರದ ವ್ಯಾಪ್ತಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ನಿಯಮಾನುಸಾರ ದಾಖಲೆಗಳನ್ನು ಕೇಳಲಾಗಿದೆ. ಇದನ್ನು ದಾಳಿ ಎಂದು ಬಿಂಬಿಸುವುದು ರಾಜಕೀಯ ಪ್ರೇರಿತ ಅಪಪ್ರಚಾರ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು. ಇದುವರೆಗೆ ಕನ್ನಡದಲ್ಲಿಯೇ ಆಡಿಟ್ ವರದಿ ಸಲ್ಲಿಸಲಾಗುತ್ತಿತ್ತು. ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸುವ ಸಂದರ್ಭದಲ್ಲಿ ಕೆಲವು ಗೊಂದಲಗಳು ಉಂಟಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂಗ್ಲಿಷ್‌ನಲ್ಲಿಯೇ ಆಡಿಟ್ ವರದಿ ಸಲ್ಲಿಸಲಾಗುವುದು ಎಂದರು.

ಸೊಸೈಟಿ ವಿರುದ್ಧದ ಅಪಪ್ರಚಾರದ ಹಿಂದೆ ರಾಜ್ಯ ಬಿಜೆಪಿಯನ್ನು ಮುನ್ನಡೆಸುತ್ತಿರುವ ವ್ಯಕ್ತಿಯೊಬ್ಬರ ಕುತಂತ್ರವಿದೆ ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಹಾಗೂ ಸೋಮಣ್ಣ ಅವರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ದಾಳಿಯ ವದಂತಿಗಳಿಂದ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಸಾರ್ವಜನಿಕರ ಪ್ರತಿಯೊಂದು ರೂಪಾಯಿ ಹಣವೂ ಸುರಕ್ಷಿತವಾಗಿದೆ. ವದಂತಿಗಳ ನಡುವೆಯೂ ಈ ವಾರ ಸೊಸೈಟಿಗೆ 9 ಕೋಟಿ ರೂಪಾಯಿ ಠೇವಣಿ ಬಂದಿದೆ ಎಂದು ತಿಳಿಸಿದ ಯತ್ನಾಳ್, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಒಟ್ಟಿನಲ್ಲಿ, ಸಿದ್ದಸಿರಿ ಸೊಸೈಟಿ ಮೇಲಿನ ಇಡಿ ಮತ್ತು ಐಟಿ ದಾಳಿಯ ವದಂತಿಗಳನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಒಂದು ಕೋಟಿ ರೂಪಾಯಿ ಬಹುಮಾನದ ಸವಾಲು ಹಾಕುವ ಮೂಲಕ ರಾಜಕೀಯ ವಿರೋಧಿಗಳಿಗೆ ನೇರ ತಿರುಗೇಟು ನೀಡಿದ್ದಾರೆ. ಮುಂದೆ ಯಾವ ಯಾವ ತಿರುವು ಪಡೆದುಕೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!