ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸಹಿತ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂಬ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 10 ಸಾವಿರಕ್ಕೂ ಅಧಿಕ ಮಕ್ಕಳು ವಿಜ್ಞಾನ ಜಾತ್ರೆಯಲ್ಲಿ ಭಾಗಿ ವಿವಿಧ ವಿಜ್ಞಾನದ ಮಾದರಿಗಳ ಪ್ರದರ್ಶನ ಕುತೂಹಲದಿಂದ ವೀಕ್ಷಣೆ ಮಾಡಿ ಮಾಹಿತಿ ಪಡೆದರು. ಹಾಗಾದರೆ ಈ ವಿಜ್ಞಾನ ಜಾತ್ರೆ ನಡೆದಿದ್ದಾದರೂ ಎಲ್ಲೀ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…

ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ಇಂದು ವಿಜ್ಞಾನ ಜಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮಕ್ಕಳ ದಿನಾಚರಣೆ ಅಂಗವಾಗಿ ಈ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದ್ದು ಗ್ರಾಮೀಣ ಭಾಗದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಸದುದ್ದೇಶದಿಂದ ಹಮ್ಮಿಕೊಂಡ ವಿಜ್ಞಾನ ಜಾತ್ರೆ ಎಂಬ ಹೆಸರಿನಡಿ ವಿಜ್ಞಾನ ವಸ್ತು ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಇಂದಿನ ಸ್ಪರ್ಧಾತ್ಮಕ ಹಾಗೂ ತಾಂತ್ರಿಕ ಜಗತ್ತಿನಲ್ಲಿ ಮಕ್ಕಳಲ್ಲಿ ಬಾಲ್ಯದಿಂದಲೇ ವೈಜ್ಞಾನಿಕ ಚಿಂತನೆ, ಕುತೂಹಲ ಮತ್ತು ಸೃಜನ ಶೀಲತೆಯನ್ನು ಬೆಳೆಸುವುದು ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಜ್ಞಾನದ ವಿಸ್ಮಯಗಳನ್ನು ಪರಿಚಯಿಸಲು ಮತ್ತು ಅವರಲ್ಲಿ ಪ್ರಾಯೋಗಿಕ ಜ್ಞಾನವನ್ನು ವೃದ್ಧಿಸಲು ವಿಜ್ಞಾನ ಜಾತ್ರೆ ಹಾಗೂ ವಿಜ್ಞಾನದ ವಸ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು…

ನೂರಾರು ಶಾಲೆಯ ವಿದ್ಯಾರ್ಥಿಗಳು ತಯಾರಿಸಲ್ಪಟ್ಟ 175 ಕ್ಕೂ ಅಧಿಕ ನವೀನ ಮಾದರಿಗಳನ್ನು ವಿಜ್ಞಾನ ಪ್ರಯೋಗಗಳ ಪ್ರದರ್ಶನ ಮಾಡಲಾಗಿತ್ತು. ಅತ್ಯುತ್ತಮ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸುವ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ಹಾಗೂ ಪ್ರಶಸ್ತಿ ಸಹಿತ ವಿತರಣೆ ಮಾಡಲಾಯಿತು. ಗ್ರಾಮೀಣ ಪ್ರದೇಶದ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದು ಮತ್ತು ಅವರಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ವೇದಿಕೆ ಕಲ್ಪಿಸುವುದು ಈ ಜಾತ್ರೆಯ ಮುಖ್ಯ ಉದ್ದೇಶವಾಗಿತ್ತು. 5 ರಿಂದ 10 ನೇ ತರಗತಿಯ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ವಿಜ್ಞಾನ ಜಾತ್ರೆಯಲ್ಲಿ ಪಾಲ್ಗೊಂಡು ವೈಜ್ಞಾನಿಕ ಮಾಹಿತಿ ಪಡೆದರು…
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಬಿ ಎಲ್ ಡಿ ಇ ಸಂಸ್ಥೆ ಮತ್ತು ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ಈ ವಿಜ್ಞಾನ ಜಾತ್ರೆ ನಡೆಯಿತು. ಗ್ರಾಮೀಣ ಭಾಗದ ಅತಿ ದೊಡ್ಡ ವಿಜ್ಞಾನ ಜಾತ್ರೆ ಇದಾಗದ್ದು ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಈ ವಿಜ್ಞಾನ ಜಾತ್ರೆ ಬುನಾದಿ ಹಾಕಿದೆ…
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
