ಮನುಷ್ಯನಿಗೆ ಹಸಿವಾದರೆ ಆಹಾರ ಹುಡುಕಿಕೊಳ್ಳುತ್ತಾನೆ, ಬಾಯಾರಿಕೆಯಾದರೆ ನೀರು ಕುಡಿಯುತ್ತಾನೆ. ಆದರೆ ಪ್ರಕೃತಿಯ ಮಡಿಲಲ್ಲಿ ಬದುಕುವ ಮೂಕ ಪಕ್ಷಿಗಳ ಪಾಡೇನು? ಬೇಸಿಗೆಯ ಬಿಸಿಲು, ನೀರಿನ ಕೊರತೆಯ ನಡುವೆ ಈ ಪುಟ್ಟ ಜೀವಿಗಳಿಗೆ ಆಸರೆ ಯಾಗುತ್ತಿರುವವರು ಕೆಲವೇ ಕೆಲವರು. ಅಂತಹ ಪಕ್ಷಿಪ್ರೇಮಿಗಳ ಸಾಲಿನಲ್ಲಿ ವಿಜಯಪುರದ ಆನಂದ ನಗರದ ರವಿ ಸಿಂಹಾಸನ ಕೂಡ ಒಬ್ಬರು. ಕಳೆದ ಹತ್ತು ವರ್ಷಗಳಿಂದ ತಮ್ಮ ಮನೆಯ ಆವರಣದಲ್ಲಿ ಗುಬ್ಬಿಗಳಿಗೆ ಕಾಳು, ಅಕ್ಕಿ ಹಾಗೂ ನೀರು ಒದಗಿಸುತ್ತಿರುವ ಇವರು, ಇದೀಗ ಗಿಳಿಗಳಿಗೂ ಆತಿಥ್ಯ ನೀಡುತ್ತಿದ್ದಾರೆ. ಪಕ್ಷಿಗಳ ಮೇಲಿನ ಇವರ ಕಾಳಜಿ ಇತರರಿಗೂ ಮಾದರಿಯಾಗಿದೆ. ಈ ಕುರಿತು ಇಲ್ಲಿದೆ ಒಂದು ವರದಿ….

ಇದು ಕೇವಲ ಅಕ್ಕಿ, ಸಜ್ಜೆ ಮತ್ತು ನೀರು ಇಡುವ ಕೆಲಸವಲ್ಲ… ಮೂಕ ಜೀವಿಗಳ ಮೇಲಿನ ಅಪಾರ ಪ್ರೀತಿ ಮತ್ತು ಕಾಳಜಿಯ ಪ್ರತೀಕ! ಹೌದು… ವಿಜಯಪುರ ನಗರದ ಆನಂದ ನಗರ ನಿವಾಸಿ ರವಿ ಸಿಂಹಾಸನ ಕಳೆದ ಹತ್ತು ವರ್ಷಗಳಿಂದ ತಮ್ಮ ಮನೆಯ ಆವರಣದಲ್ಲಿ ಗುಬ್ಬಿಗಳಿಗೆ ಆಹಾರ ಮತ್ತು ನೀರನ್ನು ಇಡುತ್ತಾ ಬಂದಿದ್ದಾರೆ. ಪ್ರತಿದಿನ ಮನೆಗೆ ಬರುವ ಗುಬ್ಬಿಗಳ ಚಿಲಿಪಿಲಿ ಕಲರವವೇ ಇವರಿಗೆ ಸಂತಸ ನೀಡುತ್ತದೆ. ಇತ್ತೀಚೆಗೆ ಇವರ ಮನೆಯ ಅಂಗಳಕ್ಕೆ ಎರಡು ಜೋಡಿ ಗಿಳಿಗಳು ಕೂಡ ಆಗಮಿಸಿವೆ. ಪ್ರತಿನಿತ್ಯ ಬಂದು ಆಹಾರ ಸೇವಿಸುವ ಗಿಳಿಗಳನ್ನು ಕಂಡು ರವಿ ಸಿಂಹಾಸನ ಅವರ ಸಂತಸ ಇಮ್ಮಡಿಯಾಗಿದೆ. ಮೂಕ ಪಕ್ಷಿಗಳೊಂದಿಗೆ ಬೆಸೆದುಕೊಂಡಿರುವ ಈ ನಂಟು, ಪ್ರಕೃತಿಯೊಂದಿಗಿನ ಪ್ರೀತಿಯ ಸುಂದರ ನಿದರ್ಶನವಾಗಿದೆ.
ಇನ್ನೂ ಬೇಸಿಗೆಯ ಬಿಸಿಲು ಹೆಚ್ಚಾದಂತೆ ಮನುಷ್ಯರಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳಿಗೂ ಆಹಾರ ಮತ್ತು ನೀರಿನ ಅಗತ್ಯ ಹೆಚ್ಚಾಗುತ್ತದೆ. ನೀರು ಮತ್ತು ಆಹಾರ ಸಿಗದೆ ಅನೇಕ ಪಕ್ಷಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೂ ಇದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಮೇಲ್ಛಾವಣಿ, ಅಂಗಳ ಅಥವಾ ಕಾಂಪೌಂಡ್ನಲ್ಲಿ ಒಂದು ಸಣ್ಣ ಪಾತ್ರೆಯಲ್ಲಿ ನೀರು ಮತ್ತು ಮತ್ತೊಂದು ಪಾತ್ರೆಯಲ್ಲಿ ಕಾಳುಗಳನ್ನು ಇಟ್ಟರೆ, ಈ ಪುಟ್ಟ ಜೀವಿಗಳಿಗೆ ದೊಡ್ಡ ಆಸರೆಯಾಗಬಹುದು. ಪಕ್ಷಿಗಳಿಗಾಗಿ ನಾವು ಮಾಡುವ ಸಣ್ಣ ಕೆಲಸವೇ ಅವುಗಳ ಬದುಕಿಗೆ ನೆರವಾಗಬಲ್ಲದು. ರವಿ ಸಿಂಹಾಸನ ಅವರ ಈ ಹತ್ತು ವರ್ಷಗಳ ಕಾಳಜಿ, ಪ್ರತಿಯೊಬ್ಬರ ಮನೆಯಲ್ಲೂ ಪಕ್ಷಿಪ್ರೇಮದ ಅಭ್ಯಾಸ ಆರಂಭವಾಗಲಿ ಎಂಬ ಸಂದೇಶವನ್ನು ಸಾರುತ್ತಿದೆ.
ಒಟ್ಟಾರೆ, ಪ್ರಕೃತಿಯ ಸೌಂದರ್ಯ ಹೆಚ್ಚಿಸುವುದು ಈ ಪುಟ್ಟ ಜೀವಿಗಳು. ಅವುಗಳ ಚಿಲಿಪಿಲಿ ಕಲರವ ನಮ್ಮ ಬದುಕಿಗೂ ಹೊಸ ಉಲ್ಲಾಸ ನೀಡುತ್ತದೆ. ಹೀಗಾಗಿ, ಪಕ್ಷಿಗಳಿಗಾಗಿ ಒಂದು ಹಿಡಿ ಕಾಳು, ಒಂದು ಪಾತ್ರೆ ನೀರು ಇಡುವ ಸಂಕಲ್ಪವನ್ನು ನಾವೆಲ್ಲರೂ ಮಾಡೋಣ. ನಮ್ಮ ಮನೆಯ ಅಂಗಳವನ್ನೂ ಮೂಕ ಪಕ್ಷಿಗಳಿಗೆ ಆಶ್ರಯ ತಾಣವಾಗಿಸಿರುವದು ಶ್ಲಾಘನೀಯ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
