Vijaypura

ಅಸ್ಮಿತಾ ಖೇಲೋ ಇಂಡಿಯಾ ರಾಜ್ಯ ಮಟ್ಟದ ವುಮೆನ್ಸ್ ಟ್ರ್ಯಾಕ್ ಟೂರ್ನಾಮೆಂಟ್‌ ಗೆ ವಿದ್ಯುಕ್ತ ತೆರೆ

Share

ಕೇಂದ್ರ ಸರಕಾರದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾಡಳಿತ, ವಿಜಯಪುರ ಸೈಕ್ಲಿಂಗ್ ಗ್ರೂಪ್ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರ ಹೊರವಲಯದ ಭೂತನಾಳ ಕೆರೆ ಬಳಿಯಿರುವ ವೆಲೋಡ್ರೋಮ್ ನಲ್ಲಿ ಎರಡು ದಿನಗಳ ಕಾಲ ನಡೆದ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯ ಮಟ್ಟದ ವುಮೆನ್ಸ್ ಟ್ರ್ಯಾಕ್ ಟೂರ್ನಾಮೆಂಟ್ ನ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ಟೂರ್ನಾಮೆಂಟ್‌ ನಲ್ಲಿ ಪದಕ ವಿಜೇತ ಸೈಕ್ಲಿಸ್ಟ್‌ ಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸುವ ಮೂಲಕ ಸೈಕ್ಲಿಸ್ಟ್‌ ಗಳನ್ನು ಹುರಿದುಂಬಿಸಿದರು.
ಇದಕ್ಕೂ ಮುನ್ನ ಆದರ್ಶನಗರದ ಅಪರಾಧ ವಿಭಾಗದ ಪಿಎಸ್‌ ಐ ಪ್ರೇಮಾ ಕುಚಬಾಳ ಪದಕ ವಿತರಿಸಿ, ನಾನು ವಿದ್ಯಾರ್ಥಿ ದೆಸೆಯಲ್ಲಿ ಅಥ್ಲೆಟಿಕ್‌ ಕ್ರೀಡಾಪಟುವಾಗಿದ್ದೆ. ಅದರಲ್ಲಿ ರಾಜ್ಯ ಮಟ್ಟದ ಪದಕ ಕೂಡ ಪಡೆದಿದ್ದೆ. ಬಳಿಕ ಕ್ರೀಡಾ ಕೋಟಾದಲ್ಲಿ ಪೊಲೀಸ್‌ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ ಆಗಿ ನೇಮಕವಾದೆ. ಈಗ ಪಿಎಸ್‌ಐ ಹುದ್ದೆಗೆ ಪದೋನ್ನತಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದ ಅವರು, ಹಾಗಾಗಿ ಸೈಕ್ಲಿಸ್ಟ್‌ ಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪಸರಿಸಬೇಕು. ಜೊತೆಗೆ ಕ್ರೀಡಾ ಕೋಟಾದಲ್ಲಿ ಸರಕಾರಿ ಸೇವೆಗೆ ನೇಮಕವಾಗಬೇಕು ಎಂದರು.


ಸಿಎಫ್‌ ಐನ ಪಿಸಿಪಿಯಾದ ಸದ್ದಾ ರೋಕಡೆ ಮಾತನಾಡಿ, ಪ್ರತಿಯೊಂದೂ ಸೈಕ್ಲಿಂಗ್‌ ಕ್ರೀಡಾಕೂಟಗಳನ್ನು ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮವಾಗಿ ಸಂಘಟಿಸಲಾಗುತ್ತಿದೆ. ಕಳೆದೆರಡು ದಿನಗಳಿಂದ ವಿಜಯಪುರದಲ್ಲಿ ನಡೆದ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯ ಮಟ್ಟದ ವುಮೆನ್ಸ್ ಟ್ರ್ಯಾಕ್ ಟೂರ್ನಾಮೆಂಟ್ ಕೂಡಾ ಅಚ್ಚುಕಟ್ಟಾಗಿತ್ತು. ಭವಿಷ್ಯದ ದಿನಗಳಲ್ಲಿ ವಿಜಯಪುರದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಿದರೆ, ಸಿಎಫ್‌ ಐ ಸಕಲ ಸಹಾಯ-ಸಹಕಾರ ನೀಡಲಿದೆ ಎಂದರು.

ಕರ್ನಾಟಕ ರಾಜ್ಯ ಅಮೇಚೂರ್‌ ಸೈಕ್ಲಿಂಗ್‌ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ರಾಜು ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯ ಮಟ್ಟದ ವುಮೆನ್ಸ್ ಟ್ರ್ಯಾಕ್ ಟೂರ್ನಾಮೆಂಟ್ ನಲ್ಲಿ ಕ್ರಮವಾಗಿ ಸ್ಥಾನ ಪಡೆದ ಸೈಕ್ಲಿಸ್ಟ್‌ ಗಳಿಗೆ ವೇದಿಕೆ ಮೇಲಿದ್ದ ಗಣ್ಯರು ಪದಕದೊಂದಿಗೆ ನಗದು ಬಹುಮಾನ ವಿತರಿಸಿ, ಸೈಕ್ಲಿಸ್ಟ್‌ ಗಳಿಗೆ ಶುಭ ಕೋರಿದರು.

ಅಸೋಸಿಯೇಶನ್‌ ನಿಂದ ಸನ್ಮಾನ:
ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) ನೀತಿಶಾಸ್ತ್ರ ಸಮಿತಿಗೆ ನೂತನ ಸದಸ್ಯರಾಗಿ ನಾಮನಿರ್ದೇಶನಗೊಂಡ ಕರ್ನಾಟಕ ರಾಜ್ಯ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜು ಬಿರಾದಾರ ಅವರನ್ನು ಇದೇ ವೇಳೆ ಜಿಲ್ಲಾ ಸೈಕ್ಲಿಂಗ್‌ ಅಸೋಸಿಯೇಶನ್‌ ಪದಾಧಿಕಾರಿಗಳು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸೈಕ್ಲಿಂಗ್‌ ಹಾಸ್ಟೇಲ್‌ನ ತರಬೇತುದಾರರಾದ ಅಲ್ಕಾ ಪಡತಾರೆ, ಬಿ.ಜಿ. ಚಿಮ್ಮಲಗಿ, ಸೈಕ್ಲಿಂಗ್‌ ಅಸೋಸಿಯೇಶನ್‌ ಜಿಲ್ಲಾ ಪದಾಧಿಕಾರಿಗಳಾದ ಸಂಜೀವ ಪಡತರೆ, ನಿಜಪ್ಪ ಎಂಟೆತ್ತು, ಲಕ್ಷ್ಮಣ ಕುರಣಿ, ಸಂತೋಷ ಕತಕನಹಳ್ಳಿ, ಅಶೋಕ ಭೂತನಾಳ ಸೇರಿದಂತೆ ಜಿಲ್ಲಾ ಸೈಕ್ಲಿಂಗ್‌ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಜಿಲ್ಲಾ ಸೈಕ್ಲಿಂಗ್‌ ಸಂಸ್ಥೆ ಉಪಾಧ್ಯಕ್ಷ ಆರ್‌.ವೈ. ಶೀಲವಂತ ನಿರೂಪಿಸಿದರು. ಶ್ರೀಕಾಂತ ಮಠ ವಂದಿಸಿದರು.

Tags:

error: Content is protected !!