Vijaypura

ವಿಜಯಪುರದಲ್ಲಿ ಲಾವಣಿ ನೃತ್ಯದ ಅಬ್ಬರ; ಮಹಾರಾಷ್ಟ್ರದ ಜಾನಪದ ಕಲೆಗೆ ಮನಸೋತ ಜನತೆ

Share

ಐತಿಹಾಸಿಕ‌ ವಿಜಯಪುರ ನಗರದಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ಸ್ವಾಗತ ಆದಿಶಕ್ತಿ ತರುಣ ಮಂಡಳ ವತಿಯಿಂದ ನಾಡದೇವಿಯ ಆರಾಧನೆಯೊಂದಿಗೆ ಒಂಬತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರ ಭಾಗವಾಗಿ ನಡೆದ ಮಹಾರಾಷ್ಟ್ರದ ಪ್ರಸಿದ್ಧ ಲಾವಣಿ ನೃತ್ಯ ಪ್ರೇಕ್ಷಕರ ಮನಗೆದ್ದಿದೆ. ಥಳಕು-ಬೆಳಕಿನ ವೇದಿಕೆ, ಡೋಲಕ್ ಸೇರಿದಂತೆ ವಿವಿಧ ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕಿದ ಕಲಾವಿದರು ನೆರೆದಿದ್ದವರನ್ನು ರಂಜಿಸಿದರು. ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಜನರು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಈ ಕುರಿತ ವರದಿ ಇಲ್ಲಿದೆ.

ನವರಾತ್ರಿ ಎಂದರೆ ಶಕ್ತಿ ಆರಾಧನೆಯ ಜೊತೆಗೆ ಕಲೆ, ಸಂಸ್ಕೃತಿ ಹಾಗೂ ಸಂಭ್ರಮದ ಹಬ್ಬ. ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ಸ್ವಾಗತ ಆದಿಶಕ್ತಿ ತರುಣ ಮಂಡಳ ವತಿಯಿಂದ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ನಿಮಿತ್ತ ಒಂಬತ್ತು ದಿನಗಳ ಕಾಲ ಪಂಚಲೋಹದ ನಾಡದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪುಟಾಣಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಲಾಗಿದೆ. ಇದರೊಂದಿಗೆ ಜನಪದ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಉತ್ಸವದ ಮೆರುಗನ್ನು ಹೆಚ್ಚಿಸಿವೆ.

ಇನ್ನು, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ಮಹಾರಾಷ್ಟ್ರದ ಜನಪ್ರಿಯ ಜಾನಪದ ಕಲೆಯಾದ ಲಾವಣಿ ನೃತ್ಯ. ಲಾವಣಿ ಎಂಬುದು ಸಂಗೀತ, ಲಯಬದ್ಧ ಹೆಜ್ಜೆ ಹಾಗೂ ಅಭಿವ್ಯಕ್ತಿಯ ಸಮ್ಮಿಲನವಾಗಿದ್ದು, ಮಹಾರಾಷ್ಟ್ರದ ಸಾಂಸ್ಕೃತಿಕ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಉತ್ತರ ಕರ್ನಾಟಕದಲ್ಲಿಯೂ ಈ ಕಲಾಪ್ರಕಾರಕ್ಕೆ ತನ್ನದೇ ಆದ ಅಭಿಮಾನಿಗಳಿದ್ದಾರೆ.
ಬಣ್ಣ ಬಣ್ಣದ ಉಡುಪು, ಆಕರ್ಷಕ ನೃತ್ಯಭಂಗಿ, ಥಳಕು-ಬೆಳಕಿನ ವೇದಿಕೆ ಹಾಗೂ ಡೋಲಕ್ ಸೇರಿದಂತೆ ವಿವಿಧ ವಾದ್ಯಗಳ ಸಂಗೀತ ಕಾರ್ಯ ಕ್ರಮಕ್ಕೆ ಮತ್ತಷ್ಟು ಕಳೆ ತಂದವು. ಲಾವಣಿ ಕಲಾವಿದರ ಲಯಬದ್ಧ ಹೆಜ್ಜೆಗಳಿಗೆ ಪ್ರೇಕ್ಷಕರು ಮನ ಸೋತರು. ನೃತ್ಯದ ಪ್ರತಿ ಹಂತದಲ್ಲೂ ಜನರು ಚಪ್ಪಾಳೆ ತಟ್ಟುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿದರು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಾರಾಷ್ಟ್ರದ ಜಾನಪದ ನೃತ್ಯವನ್ನು ಆನಂದಿಸಿದರು. ತಡರಾತ್ರಿಯವರೆಗೂ ನಡೆದ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಯಾಯಿತು.

ಒಟ್ಟಿನಲ್ಲಿ, ಧಾರ್ಮಿಕ ಭಕ್ತಿಯೊಂದಿಗೆ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ವೇದಿಕೆಯಾಗಿ ವಿಜಯಪುರದ ಶಿವಾಜಿ ವೃತ್ತದ ನವರಾತ್ರಿ ಉತ್ಸವ ಗಮನ ಸೆಳೆಯುತ್ತಿದೆ. ಲಾವಣಿ ನೃತ್ಯದ ಮೂಲಕ ಮಹಾರಾಷ್ಟ್ರದ ಜಾನಪದ ಕಲೆಯ ಸೊಬಗನ್ನು ವಿಜಯಪುರದ ಜನರಿಗೆ ಉಣಬಡಿಸಿದ ಸ್ವಾಗತ ಆದಿಶಕ್ತಿ ತರುಣ ಮಂಡಳದ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!