ಜಿಲ್ಲೆಯ ಸೈಕ್ಲಿಸ್ಟ್ ಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಲು ಹಾಗೂ ಅವರ ನಿತ್ಯ ಸೈಕ್ಲಿಂಗ್ ಅಭ್ಯಾಸಕ್ಕೆ ಉತ್ತೇಜನ ನೀಡಬೇಕೆಂಬ ಸದುದ್ದೇಶದಿಂದ ಕರ್ನಾಟಕ ರಾಜ್ಯ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಗೆ ಎರಡು ಸೈಕಲ್ ಗಳನ್ನು ಕೊಡಿಸುವುದಾಗಿ ಸಂಸದ ರಮೇಶ ಜಿಗಜಿಗಣಗಿ ಭರವಸೆ ನೀಡಿದರು.

ಕೇಂದ್ರ ಸರಕಾರದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್, ಜಿಲ್ಲಾಡಳಿತ, ವಿಜಯಪುರ ಸೈಕ್ಲಿಂಗ್ ಗ್ರೂಪ್ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ
ನಗರ ಹೊರವಲಯದ ಭೂತನಾಳ ಕೆರೆ ಬಳಿಯಿರುವ ವೆಲೋಡ್ರೋಮ್ ನಲ್ಲಿ ಶನಿವಾರ ಆರಂಭವಾದ ಅಸ್ಮಿತಾ ಖೇಲೋ ಇಂಡಿಯಾ ರಾಜ್ಯ ಮಟ್ಟದ ವುಮೆನ್ಸ್ ಟ್ರ್ಯಾಕ್ ಟೂರ್ನಾಮೆಂಟ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸೈಕ್ಲಿಸ್ಟ್ ಗಳ ಅಭ್ಯಾಸಕ್ಕೆ ಪೂರಕವಾಗಿ ನಗರದಲ್ಲಿ ವೆಲೋಡ್ರೋಮ್ ನಿರ್ಮಾಣವಾಗಬೇಕೆಂಬ ಹಲವು ದಶಕಗಳ ಬೇಡಿಕೆ ಈಗ ಈಡೇರಿದೆ. ಇಂದು ಅದೇ ವೆಲೋಡ್ರೋಮ್ ನಲ್ಲಿ ಕ್ರೀಡಾಕೂಟ ನಡೆದಿದ್ದನ್ನು ಕಣ್ತುಂಬಿಸಿಕೊಂಡೆ. ಇದರಿಂದ ನನಗೆ ಅತೀವ ಸಂತಸವಾಗಿದೆ ಎಂದ ಸಂಸದ ರಮೇಶ ಜಿಗಜಿಣಗಿ ಅವರು, ಈ ವೆಲೋಡ್ರೋಮ್ ಇಡೀ ರಾಜ್ಯದ ಕ್ರೀಡಾಪಟುಗಳಿಗೆ ಭವಿಷ್ಯದ ದಿನಗಳಲ್ಲಿ ಅನುಕೂಲವಾಗಲಿ ಎಂದು ಹಾರೈಸಿದರು.
ಇದರೊಟ್ಟಿಗೆ ಮುಂದಿನ ದಿನಗಳಲ್ಲೂ ವಿಜಯಪುರ ಸೈಕ್ಲಿಸ್ಟ್ ಗಳು ರಾಷ್ಟ್ರ ಮಟ್ಟದಲ್ಲಿ ಪಾರಮ್ಯ ಮೆರೆಯಬೇಕು ಎಂಬ ದೂರದೃಷ್ಟಿಯಿಂದ ಸೈಕ್ಲಿಸ್ಟ್ ಗಳ ಕಠಿಣ ಸೈಕ್ಲಿಂಗ್ ಅಭ್ಯಾಸವನ್ನು ಸುಗಮಗೊಳಿಸುವುದಕ್ಕೋಸ್ಕರ ಶೀಘ್ರದಲ್ಲೇ ಅಸೋಸಿಯೇಶನ್ ಗೆ ಎರಡು ಸೈಕಲ್ ಗಳನ್ನು ಕೊಡಿಸುವ ಮೂಲಕ ಸೈಕ್ಲಿಸ್ಟ್ ಗಳಿಗೆ ಹುರುಪು ತುಂಬುವುದಾಗಿ ಎಂದು ಸಂಸದ ರಮೇಶ ಜಿಗಜಣಗಿ ಹೇಳಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ಇತ್ತೀಚೆಗಷ್ಟೇ ವೆಲೋಡ್ರೋಮ್ ನಿರ್ಮಾಣವಾಗಿದೆ. ಸೈಕ್ಲಿಸ್ಟ್ ಗಳಿಗೆ ಏನೇ ತಾಂತ್ರಿಕ ತೊಂದರೆಗಳು ಎದುರಾದರೆ, ತಕ್ಷಣ ಸರಿಪಡಿಸಲಾಗುವುದು ಎಂದರು.

ಮುಂಬರುವ ದಿನಗಳಲ್ಲಿ ಈ ವೆಲೋಡ್ರೋಮ್ ನಲ್ಲಿ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಕ್ರೀಡಾಕೂಟ
ಆಯೋಜಿಸಿದರೆ ಜಿಲ್ಲಾಡಳಿತದಿಂದ ಸಕಲ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಈ ವೆಲೋಡ್ರೋಮ್ ಗೆ ಪೆವಲಿಯನ್ ಅಗತ್ಯತೆಯಿದೆ. ಅದನ್ನು ಇಷ್ಟರಲ್ಲೇ ನೀಡಲಾಗುವುದು. ಪೆವಲಿಯನ್ ತಜ್ಞರನ್ನು ಕರೆಯಿಸಿ, ಇಡೀ ವೆಲೋಡ್ರೋಮ್ ನಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಅಮೇಚೂರ ಸೈಕ್ಲಿಂಗ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜು ಬಿರಾದಾರ ಮಾತನಾಡಿ, ಸಿಎಫ್ಐನ ಸಹಕಾರ ಹಾಗೂ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ದಾನಿಗಳ ನೆರವಿನಲ್ಲಿ ನಿರಂತರವಾಗಿ ಸೈಕ್ಲಿಂಗ್ ಕ್ರೀಡಾಕೂಟಗಳನ್ನು ಆಯೋಜಿಸಲು ಅನುಕೂಲವಾಗಿದೆ ಎಂದರು.
ಮೇಲಾಗಿ ವಿಜಯಪುರ ಸೈಕ್ಲಿಸ್ಟ್ ಗಳ ಅಭ್ಯಾಸಕ್ಕೆ ಪೂರಕವಾಗಲು ವೆಲೋಡ್ರೋಮ್ ನಿರ್ಮಿಸಬೇಕೆಂಬ ದಶಕಗಳ ಕನಸು ಈಡೇರಿದ್ದು, ಉದಯೋನ್ಮುಖ ಸೈಕ್ಲಿಸ್ಟ್ ಗಳಿಗೆ ಹಾಗೂ ನಮ್ಮ ಸೈಕ್ಲಿಂಗ್ ಅಸೋಸಿಯೇಶನ್ ಪದಾಧಿಕಾರಿಗಳಿಗೆ ತೀವ್ರ ಸಂತಸವನ್ನುಂಟು ಮಾಡಿದೆ ಎಂದರು.
ಭವಿಷ್ಯದ ದಿನಗಳಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗುವುದು ಎಂದ ಅವರು, ಹಲವು ದಶಕಗಳಿಂದ ಜಿಲ್ಲೆಯಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಸೈಕ್ಲಿಂಗ್ ಆಟೋಟಗಳಿಗೆ ಭವಿಷ್ಯದ ದಿನಗಳಲ್ಲೂ ಜಿಲ್ಲೆಯ ಜನತೆ ಎಂದಿನಂತೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಿಎಫ್ ಐನ ಪಿಸಿಪಿಯಾಗಿ ಸುದಾಮ್ ರೋಕಡೆ, ಕಾರ್ಪೋರೇಟರ್ ರಾಹುಲ್ ಜಾಧವ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ, ಆರ್. ಎಸ್. ಪೂಜೇರಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ಅನೇಕ ಗಣ್ಯರು, ಸೈಕ್ಲಿಂಗ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
