Vijaypura

ಹಿಂಗಾರು ಬೆಳೆಗಳಿಗೆ ನೀರು ಬಿಡದ ನಿರ್ಧಾರ ಬದಲಿಸಿ: ಪಂಚಪ್ಪ ಕಲಬುರಗಿ ಒತ್ತಾಯ

Share

ಹಿಂಗಾರು ಹಂಗಾಮಿಗೆ ನೀರು ಬಿಡುವುದಿಲ್ಲ ಎಂಬ ನೀರು ನಿರ್ವಹಣಾ ಸಮಿತಿಯ ನಿರ್ಧಾರವನ್ನು ಬದಲಿಸಿ, ರೈತರ ಹಿತದೃಷ್ಟಿಯಿಂದ ನೀರು ಬಿಡುಗಡೆ ಮಾಡಬೇಕು ಎಂದು ಜೆಡಿಎಸ್ ಮುಖಂಡ ಪಂಚಪ್ಪ ಕಲಬುರಗಿ ಒತ್ತಾಯಿಸಿದರು. ವಿಜಯಪುರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅ. 15ರಂದು ನಡೆದ ಐಸಿಸಿ ಸಭೆಯಲ್ಲಿ ಹಿಂಗಾರು ಹಂಗಾಮಿಗೆ ನೀರು ನೀಡದಿರಲು ನಿರ್ಧರಿಸಿರುವುದು ರೈತರಿಗೆ ಸಂಕಷ್ಟ ತಂದೊಡ್ಡಲಿದೆ. ಕೃಷ್ಣಾ ಜಲಾನಯನ ಪ್ರದೇಶದ ನೀರನ್ನು ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ಬಳಸುವ ಉದ್ದೇಶವನ್ನು ಬಚಾವತ್ ಆಯೋಗದ ಮುಂದೆ ಮಂಡಿಸಲಾಗಿದೆ. ಹೀಗಿರುವಾಗ ಹಿಂಗಾರು ಬೆಳೆಗಳಿಗೆ ನೀರು ನಿರಾಕರಿಸುವುದು ಸರಿಯಲ್ಲ ಎಂದರು. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದ ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ. ಹಿಂಗಾರು ಹಂಗಾಮಿನಲ್ಲಿ ಮೂರು ತಿಂಗಳ ಕಾಲ ನೀರು ಬಿಡುಗಡೆ ಮಾಡಿದರೆ ಜೋಳ, ಗೋಧಿ, ಮೆಕ್ಕೆಜೋಳ ಸೇರಿದಂತೆ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಜಾನುವಾರುಗಳಿಗೆ ಮೇವು ದೊರೆಯಲಿದ್ದು, ರೈತರು ಜಾನುವಾರುಗಳನ್ನು ಕಸಾಯಿಖಾನೆಗೆ ಮಾರುವ ಪರಿಸ್ಥಿತಿ ತಪ್ಪಲಿದೆ ಎಂದು ಹೇಳಿದರು.

ಆಲಮಟ್ಟಿಯಲ್ಲಿ 100 ಟಿಎಂಸಿ ಹಾಗೂ ನಾರಾಯಣಪುರದಲ್ಲಿ 10 ಟಿಎಂಸಿ ನೀರು ಲಭ್ಯವಿದೆ ಎಂದು ಉಲ್ಲೇಖಿಸಿದ ಅವರು, ನೀರಿನ ಲಭ್ಯತೆ ಗಮನಿಸಿ ನೀರು ನಿರ್ವಹಣಾ ಸಮಿತಿ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು. ಆಲಮಟ್ಟಿ ಜಲಾಶಯದಲ್ಲಿ 524 ಮೀಟರ್ ಎತ್ತರಕ್ಕೆ ನೀರು ಸಂಗ್ರಹಿಸುವ ವಿಚಾರದಲ್ಲಿ ತೊಂದರೆ ಮಾಡುತ್ತಿರುವವರೇ, ತೆಲಂಗಾಣಕ್ಕೆ ನೀರು ಬಿಡುಗಡೆ ಮಾಡಿರುವುದೇಕೆ? ಅಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂಬ ಕಾರಣಕ್ಕೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ನಂತೆ 15 ದಿನ ನೀರು ಹರಿಸಲಾಗಿದೆಯೇ ಎಂದು ಪ್ರಶ್ನಿಸಿದ ಅವರು, ರೈತರ ಹಿತಕ್ಕಾಗಿ ಹಿಂಗಾರು ಬೆಳೆಗಳಿಗೆ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಖಾದ್ರಿಇನಾಂದಾರ, ರಾಜು ಹಿಪ್ಪರಗಿ, ಎಸ್.ಬಿ. ಪಾಟೀಲ ಹಾಗೂ ಸಂಜೀವ ಹಿರೇಮಠ ಉಪಸ್ಥಿತರಿದ್ದರು.

Tags:

error: Content is protected !!