Vijaypura

ನರ್ಮದೆಯಿಂದ ಲಿಂಗ ತರಲು ನಿರ್ಧಾರ; ಅಡಿಪಾಯದಲ್ಲೇ ಶಿವಲಿಂಗ ಪತ್ತೆ!

Share

ವಿಜಯಪುರ ನಗರದ ಹೊರವಲಯದಲ್ಲಿರುವ ರಂಭಾಪುರ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ವೇಳೆ ಅಡಿಪಾಯದೊಳಗೆ ಪುರಾತನ ಶಿವಲಿಂಗ ಪತ್ತೆಯಾಗಿದೆ. ಈ ಶಿವಲಿಂಗ ನಾಲ್ಕೈದು ಶತಮಾನಗಳಷ್ಟು ಹಳೆಯದಾಗಿರಬಹುದು ಎಂಬುದು ಗ್ರಾಮಸ್ಥರ ನಂಬಿಕೆ. ಆದಿಲ್ ಶಾಹಿ ಆಳ್ವಿಕೆಗಿಂತಲೂ ಹಿಂದಿನ ಇತಿಹಾಸ ಹೊಂದಿದೆ ಎಂದು ಹೇಳಲಾಗುವ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಶಿವಲಿಂಗ ಪತ್ತೆಯಾಗಿರುವುದು ಭಕ್ತರಲ್ಲಿ ಅಚ್ಚರಿ ಮತ್ತು ಕುತೂಹಲ ಮೂಡಿಸಿದೆ. ಪತ್ತೆಯಾದ ಶಿವಲಿಂಗಕ್ಕೆ ಗ್ರಾಮಸ್ಥರು ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ಜಾಗರಣೆ ಮೂಲಕ ಭಕ್ತಿಭಾವ ಮೆರೆದಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಇದು ವಿಜಯಪುರ ನಗರದ ಹೊರವಲಯದಲ್ಲಿರುವ ರಂಭಾಪುರ ಗ್ರಾಮದ ಪುರಾತನ ಶ್ರೀ ರಾಮಲಿಂಗೇಶ್ವರ ದೇವಸ್ಥಾನ. ಇಲ್ಲಿನ ಗುಹೆಯಲ್ಲಿರುವ ರಾಮಲಿಂಗೇಶ್ವರನಿಗೆ ಗ್ರಾಮಸ್ಥರು ಹಲವು ವರ್ಷಗಳಿಂದ ನಿತ್ಯ ಪೂಜೆ, ಪುನಸ್ಕಾರ ಸಲ್ಲಿಸುತ್ತಾ ಬಂದಿದ್ದಾರೆ. ದೇವಸ್ಥಾನ ಹಳೆಯದಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಗುಹೆಯ ಮೇಲ್ಭಾಗದಲ್ಲಿ ನೂತನ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಡಿಪಾಯ ತೆಗೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ನೆಲದೊಳಗೆ ಶಿವಲಿಂಗ ಪತ್ತೆಯಾಗಿದೆ. ನೂತನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ನರ್ಮದಾ ನದಿಯಿಂದ ಶಿವಲಿಂಗವೊಂದನ್ನು ತರಲು ದೇವಸ್ಥಾನದ ಕಮಿಟಿ ನಿರ್ಧರಿಸಿತ್ತು. ಆದರೆ, ಅಡಿಪಾಯ ತೆಗೆಯುವಾಗಲೇ ಶಿವಲಿಂಗ ಪತ್ತೆಯಾಗಿರುವುದು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿದೆ. ಪತ್ತೆಯಾದ ಶಿವಲಿಂಗ ನಾಲ್ಕೈದು ಶತಮಾನಗಳಷ್ಟು ಹಳೆಯ ದಾಗಿರಬಹುದು ಎಂದು ಭಕ್ತರು ನಂಬಿದ್ದಾರೆ.

ಇನ್ನು ರಂಭಾಪುರದ ಈ ಪುರಾತನ ದೇವಸ್ಥಾನಕ್ಕೆ ತನ್ನದೇ ಆದ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯಿದೆ. ದೇವಸ್ಥಾನದ ಗುಹೆಯಲ್ಲಿ ಹಿಂದೆ ನೀರಿನ ದೀಪ ಉರಿಯುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಪ್ರತಿವರ್ಷ ದವನದ ಹುಣ್ಣಿಮೆಯ ಮರುದಿನ ಇಲ್ಲಿ ಶ್ರೀ ರಾಮಲಿಂಗೇಶ್ವರ ದೇವರ ಜಾತ್ರೆ ನಡೆಯುತ್ತದೆ. ಇದೀಗ ದೇವಸ್ಥಾನದ ಗುಹೆಯ ಮೇಲ್ಭಾಗದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಈ ಕಟ್ಟಡದಲ್ಲಿ ಭಕ್ತರಿಗೆ ಶಿವಲಿಂಗದ ದರ್ಶನ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ನರ್ಮದಾ ನದಿಯಿಂದ ಲಿಂಗ ತರಲು ಕಮಿಟಿ ಯೋಜಿಸಿತ್ತು. ಆದರೆ, ದೇವಸ್ಥಾನದ ಅಡಿಪಾಯದಲ್ಲೇ ಶಿವಲಿಂಗ ಪತ್ತೆಯಾಗಿರುವುದು ಭಕ್ತರಲ್ಲಿ ವಿಶೇಷ ಭಾವನೆ ಮೂಡಿಸಿದೆ. ‘ರಾಮಲಿಂಗೇಶ್ವರ ನಮ್ಮನ್ನು ಹುಡುಕಿಕೊಂಡು ಬಂದಿದ್ದಾನೆ. ಬೇರೆಲ್ಲೂ ಹೋಗಬೇಕಿಲ್ಲ, ನಾನಿಲ್ಲೇ ಇದ್ದೇನೆ ಎಂಬಂತೆ ಭೂಮಿಯಿಂದಲೇ ಲಿಂಗ ಉದ್ಭವವಾಗಿದೆ’ ಎಂಬ ಭಾವನೆಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು, ಪತ್ತೆಯಾಗಿರುವ ಶಿವಲಿಂಗದ ವಿನ್ಯಾಸವೂ ಕುತೂಹಲಕ್ಕೆ ಕಾರಣವಾಗಿದೆ. ಕರ್ನಾಟಕದ ಮಧ್ಯಕಾಲೀನ ಶೈವ ದೇವಾಲಯಗಳಲ್ಲಿ ಇಂತಹ ವಿನ್ಯಾಸದ ಶಿವಲಿಂಗಗಳು ಕಂಡುಬರುತ್ತವೆ. ಬಾದಾಮಿ ಸೇರಿದಂತೆ ಚಾಲುಕ್ಯರ ಕಾಲದ ಕೆಲವು ದೇವಾಲಯಗಳಲ್ಲಿನ ಶಿವಲಿಂಗಗಳೊಂದಿಗೆ ಇದು ಹೋಲಿಕೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಶಿವಲಿಂಗ ಯಾವ ಕಾಲಕ್ಕೆ ಸೇರಿದ್ದು ಎಂಬುದನ್ನು ಸದ್ಯಕ್ಕೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಪುರಾತತ್ವ ತಜ್ಞರ ಅಧ್ಯಯನ ಮತ್ತು ವೈಜ್ಞಾನಿಕ ಪರಿಶೀಲನೆಯ ಬಳಿಕವಷ್ಟೇ ಅದರ ಕಾಲಮಾನ ಹಾಗೂ ಐತಿಹಾಸಿಕ ಮಹತ್ವವನ್ನು ನಿರ್ಧರಿಸಬೇಕಾಗಿದೆ. ವಿಜಯಪುರದ ಇತಿಹಾಸ ಆದಿಲ್ ಶಾಹಿಗಳಿಗಷ್ಟೇ ಸೀಮಿತವಾಗಿಲ್ಲ. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಕಲ್ಯಾಣ ಚಾಲುಕ್ಯರು ಸೇರಿದಂತೆ ಹಲವು ರಾಜವಂಶಗಳ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತ್ತು. ಗೋಳಗುಮ್ಮಟದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ರಂಭಾಪುರದಲ್ಲಿ ಪುರಾತನ ದೇವಸ್ಥಾನದ ಅಡಿಪಾಯದೊಳಗೆ ಶಿವಲಿಂಗ ಪತ್ತೆಯಾಗಿರುವುದು ಸ್ಥಳದ ಇತಿಹಾಸದ ಬಗ್ಗೆ ಮತ್ತಷ್ಟು ಅಧ್ಯಯನದ ಆಸಕ್ತಿ ಮೂಡಿಸಿದೆ. ಇನ್ನು ಶಿವಲಿಂಗ ಪತ್ತೆಯಾದ ಬಳಿಕ ಗ್ರಾಮಸ್ಥರು ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಿ ಜಾಗರಣೆ ನಡೆಸಿದ್ದಾರೆ. ಇದೀಗ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದಲೂ ಭಕ್ತರು ಆಗಮಿಸಿ ಶ್ರೀ ರಾಮಲಿಂಗೇಶ್ವರನ ದರ್ಶನ ಪಡೆಯುತ್ತಿದ್ದಾರೆ. ಭಕ್ತಿ ಮತ್ತು ಇತಿಹಾಸದ ಕುತೂಹಲ ಎರಡನ್ನೂ ಒಟ್ಟಿಗೆ ಮೂಡಿಸಿರುವ ಈ ಪತ್ತೆಯ ನೈಜ ಹಿನ್ನೆಲೆ ಪುರಾತತ್ವ ಅಧ್ಯಯನದ ಬಳಿಕ ತಿಳಿದುಬರಬೇಕಿದೆ.

ವರದಿ: ವಿಜಯಪುರ

Tags:

error: Content is protected !!