ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉಜ್ಜನಕೊಪ್ಪ ಗ್ರಾಮದ ಪ್ರಾದೇಶಿಕ ಸೇನೆಯ ಮಾಜಿ ಸೈನಿಕ ಮಲ್ಲಿಕಾರ್ಜುನ ರೆಡ್ಡರಟ್ಟಿ ಅವರು ಅನಾರೋಗ್ಯದಿಂದ ಕೆ.ಎಲ್.ಇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು ಅವರ ಸ್ವಗ್ರಾಮ ಉಜ್ಜನಕೊಪ್ಪದಲ್ಲಿ ಪ್ರಾದೇಶಿಕ ಸೇನಾಧಿಕಾರಿಗಳು, ಯೋಧರು ಹಾಗೂ ಊರಿನ ಹಿರಿಯರ ಸಮ್ಮುಖದಲ್ಲಿ ಭಾವಪೂರ್ಣ ಅಂತಿಮ ಸಂಸ್ಕಾರ ನೆರವೇರಿತು.
ಸುಮಾರು 53 ವರ್ಷ ವಯಸ್ಸಿನ ವೀರಯೋಧ ಮಲ್ಲಿಕಾರ್ಜುನ ರೆಡ್ಡರಟ್ಟಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ನಗರದ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು. ಇಂದು ದಿನಾಂಕ 17.10.2026 ರಂದು ಅವರ ಸ್ವಗ್ರಾಮವಾದ ಉಜ್ಜನಕೊಪ್ಪದಲ್ಲಿ ಪ್ರಾದೇಶಿಕ ಸೇನೆಯ ಸೈನ್ಯಾಧಿಕಾರಿಗಳು, ಸೈನಿಕರು, ಪ್ರಾದೇಶಿಕ ಸೇನೆಯ ಮಾಜಿ ಸೈನಿಕರ ಕಲ್ಯಾಣ ಸಂಘ ಹಾಗೂ ಎರಗಟ್ಟಿ ತಾಲೂಕು ಮಾಜಿ ಸೈನಿಕರ ಒಕ್ಕೂಟದ ನೇತೃತ್ವದಲ್ಲಿ, ಗ್ರಾಮದ ಗುರು-ಹಿರಿಯರ ಉಪಸ್ಥಿತಿಯಲ್ಲಿ ಅಂತಿಮ ಕ್ರಿಯಾಧಿವಿಧಿಗಳನ್ನು ನೆರವೇರಿಸಲಾಯಿತು. ಮೃತರು ಪತ್ನಿ, ಐವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಈ ಅಂತಿಮ ನಮನ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸೇನೆಯ ಮಾಜಿ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷರಾದ ಶ್ರೀ ವಿಲಾಸ ಜಂಗಲಿ, ಚಂದ್ರಶೇಖರ ಸವಡಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಮಾಜಿ ಯೋಧರು ಭಾಗವಹಿಸಿ ಅಮರ ಜವಾನನಿಗೆ ಅಂತಿಮ ನಮನ ಸಲ್ಲಿಸಿದರು.
