ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯು ಗಾಳಿಗೆ ತೂರಿ ಹೋಗಿದ್ದು, ಅಕ್ರಮ ಕಸಾಯಿಖಾನೆಯೊಂದರ ಮೇಲೆ ಹಿಂದೂ ಕಾರ್ಯಕರ್ತರು ಮತ್ತು ಸಾರ್ವಜನಿಕರು ದಿಢೀರ್ ದಾಳಿ ನಡೆಸಿದ್ದಾರೆ. ಕಾನೂನು ಬಾಹಿರವಾಗಿ ಹಸು ಹಾಗೂ ಎತ್ತುಗಳನ್ನು ಕತಲ್ ಮಾಡುತ್ತಿದ್ದ ವೇಳೆ ಪೊಲೀಸರ ಸಹಾಯದಿಂದ ಮಾಲೀಕನನ್ನು ವಶಕ್ಕೆ ಪಡೆಯಲಾಗಿದ್ದು, ಕೂಡಲೇ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್ ಠಾಣೆಯೆದುರು ಉಗ್ರ ಎಚ್ಚರಿಕೆ ನೀಡಲಾಗಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ, ಲೆಕ್ಕಿಸದೆ ಗುಟ್ಟಾಗಿ ಅಕ್ರಮ ಕಸಾಯಿಖಾನೆಯನ್ನು ನಡೆಸುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ. ಸ್ಥಳೀಯ ನಾಗರಿಕರು ಹಾಗೂ ಹಿಂದೂ ಕಾರ್ಯಕರ್ತರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಎಚ್ಚೆತ್ತ ಕಾರ್ಯಕರ್ತರು ತಕ್ಷಣವೇ ಸ್ಥಳೀಯರೊಂದಿಗೆ ಹಾಗೂ ಪೊಲೀಸರೊಂದಿಗೆ ರಾಮದುರ್ಗದ ಅಕ್ರಮ ಕಸಾಯಿಖಾನೆಯ ಮೇಲೆ ದಾಳಿ ನಡೆಸಿದರು. ಈ ವೇಳೆ ಗೋವುಗಳನ್ನು ಅಕ್ರಮವಾಗಿ ಕಳಪೆ ಪರಿಸರದಲ್ಲಿ ಕಟಾವು ಮಾಡುತ್ತಿರುವುದು ಪ್ರತ್ಯಕ್ಷವಾಗಿ ಕಂಡುಬಂದಿದೆ.
ದಾಳಿಯ ವೇಳೆ ಸಿಕ್ಕಿಬಿದ್ದ ಕಸಾಯಿಖಾನೆಯ ಮಾಲೀಕನನ್ನು ಸ್ಥಳದಲ್ಲೇ ವಶಕ್ಕೆ ಪಡೆದ ಕಾರ್ಯಕರ್ತರು, ಆತನನ್ನು ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಒಪ್ಪಿಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಧಾರವಾಡ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು, ನಿಪ್ಪಾಣಿ ಮತ್ತು ಬೆಳಗಾವಿಯ ಗೋರಕ್ಷಕರು ಹಾಗೂ ನೂರಾರು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು. ಇನ್ನು ಮುಂದೆಯೂ ಈ ರೀತಿಯ ಕಾನೂನುಬಾಹಿರ ಕತ್ಯಗಳು ಮುಂದುವರಿದರೆ, ಹಿಂದೂ ಸಂಘಟನೆಗಳಿಂದ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿರುವ ಕಾರ್ಯಕರ್ತರು, ಪೊಲೀಸರು ಕೂಡಲೇ ಈ ಕೂಡಲೇ ಎಫ್‌ಐಆರ್ ದಾಖಲಿಸಬೇಕೆಂದು ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ.
