ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ರೈತರು ಬೃಹತ್ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ನೂರಾರು ರೈತರು ದಶಕಗಳ ತಮ್ಮ ಬೇಡಿಕೆಗಾಗಿ ಗೋಡಚಿಯಿಂದ ಸಾಲಹಳ್ಳಿವರೆಗೆ ಬೃಹತ್ ರ್ಯಾಲಿ ನಡೆಸಿ, ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.


ರಾಮದುರ್ಗ ತಾಲೂಕಿನ ದಶಕಗಳ ಕನಸಾದ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಹಾಗೂ ಸಾಲಾಪುರ ಏತ ನೀರಾವರಿ ಯೋಜನೆಯನ್ನು ತಕ್ಷಣವೇ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಭೀಕರ ಪ್ರತಿಭಟನೆ ನಡೆಸಲಾಯಿತು. ತಾಲೂಕಿನ ಪ್ರಸಿದ್ಧ ಗೋಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಸಾಲಹಳ್ಳಿ ಗ್ರಾಮದ ವರೆಗೂ ರೈತರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹಾಗೂ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರ ನೇರ ಮುಂಚೂಣಿಯಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ಅನ್ನದಾತರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರ್ಯಾಲಿಯುದ್ದಕ್ಕೂ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರೈತರು, ಸಾಲಹಳ್ಳಿ ಗ್ರಾಮದ ಬಳಿ ಇರುವ ಬೆಳಗಾವಿ – ಬಾಗಲಕೋಟೆ ರಾಜ್ಯ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಿ ರಸ್ತೆ ಮಧ್ಯದಲ್ಲೇ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ದಶಕಗಳಿಂದ ನೀರಾವರಿ ಯೋಜನೆಗಳಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ಆಳುವ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಕೇವಲ ಭರವಸೆ ನೀಡಿ ಉದಾಸೀನತೆ ತೋರುತ್ತಿದ್ದಾರೆ ಎಂದು ರೈತ ಮುಖಂಡರು ಕಿಡಿಕಾರಿದರು.
ಹೆದ್ದಾರಿ ಬಂದ್ ಆದ ಹಿನ್ನೆಲೆಯಲ್ಲಿ ಗಂಟೆಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡಿದ್ದು, ತಕ್ಷಣವೇ ಸಂಬಂಧಪಟ್ಟ ಸಚಿವರು ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡದಿದ್ದರೆ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
