Chikkodi

ಚಿಕ್ಕೋಡಿಯ ಪ್ರಭುವಾಡಿಯಲ್ಲಿ ಅದ್ಧೂರಿ ‘ಆಷಾಢಿ ದಿಂಡಿ’ ಮೆರವಣಿಗೆ: ಶ್ರದ್ಧಾ-ಭಕ್ತಿಯಿಂದ ಜರುಗಿದ ಆಷಾಢ ಏಕಾದಶಿ ಮಹೋತ್ಸವ

Share

ನಗರದ ಪ್ರಭುವಾಡಿಯ ಶ್ರೀ ರಾಮಕೃಷ್ಣ ಭಜನ ಮಂಡಳಿ ಹಾಗೂ ‘ನವಯುಗ ಗಜಾನನ ಮಂಡಳಿ’ಯ ಜಂಟಿ ಆಶ್ರಯದಲ್ಲಿ ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಆಷಾಢಿ ದಿಂಡಿ ಯಾತ್ರೆಯನ್ನು ಅತ್ಯಂತ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮ-ಸಡಗರಗಳಿಂದ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ವಿಠ್ಠಲ-ರುಕ್ಮಿಣಿಯ ಮೂರ್ತಿಯನ್ನು ಶೃಂಗರಿಸಿದ ಪಲ್ಲಕ್ಕಿಯಲ್ಲಿರಿಸಿ ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ನೆರವೇರಿಸಿ, ದೇವಸ್ಥಾನದ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಅಲಂಕೃತ ಎತ್ತಿನ ಬಂಡಿಯಲ್ಲಿ ವಿಠ್ಠಲ-ರುಕ್ಮಿಣಿಯ ಭಾವಚಿತ್ರ ಹಾಗೂ ಪಲ್ಲಕ್ಕಿಯೊಂದಿಗೆ ಭವ್ಯ ದಿಂಡಿ ಮೆರವಣಿಗೆಯನ್ನು ಹೊರತರಲಾಯಿತು. ಪ್ರಭುವಾಡಿಯಿಂದ ಆರಂಭವಾದ ಈ ಮೆರವಣಿಗೆಯು ರಾಮಾ ಮಾನೆ ಅವರ ನಿವಾಸದಲ್ಲಿ ವಿಶೇಷ ಪೂಜೆ ಸ್ವೀಕರಿಸಿದ ನಂತರ ಆರ್.ಕೆ. ಕಾಲೋನಿ, ಬಸ್ ನಿಲ್ದಾಣ, ಕೆ.ಸಿ. ರಸ್ತೆ ಹಾಗೂ ಶಿವಾಜಿ ಚೌಕ್ ಮಾರ್ಗವಾಗಿ ಸಾಗಿ ಪ್ರಭುವಾಡಿಯ ಹನುಮಾನ ದೇವಸ್ಥಾನದಲ್ಲಿ ಮಹಾಮಂಗಳಾರತಿಯೊಂದಿಗೆ ಮುಕ್ತಾಯಗೊಂಡಿತು.

ಮೆರವಣಿಗೆಯುದ್ದಕ್ಕೂ ತುರುಂಬೆಯ ಆಧ್ಯಾತ್ಮಿಕ ವಿದ್ಯಾಮಂದಿರದ ಓಂಕಾರ್ ಸೂರ್ಯವಂಶಿ ಅವರ ನೇತೃತ್ವದಲ್ಲಿ ಭಕ್ತಾದಿಗಳು ತಾಳ-ಮೇಳಗಳ ನಾದಕ್ಕೆ ತಕ್ಕಂತೆ ವಿವಿಧ ಪಾವಲಾಯ ಆಟಗಳನ್ನು ಪ್ರದರ್ಶಿಸಿ ನೆರೆದಿದ್ದವರ ಗಮನ ಸೆಳೆದರು. ರಿಂಗಣ ಸೋಹಳ ಹಾಗೂ ಮಹಿಳೆಯರು ಪ್ರದರ್ಶಿಸಿದ ಸಾಂಪ್ರದಾಯಿಕ ಜಿಮ್ಮಾ-ಫುಗಡಿ ಆಟಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. ಭಾಗವಹಿಸಿದ್ದ ಎಲ್ಲಾ ಭಕ್ತಾದಿಗಳಿಗೆ ವಿಶೇಷ ಏಕಾದಶಿ ಫರಾಳ (ಉಪಹಾರ) ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಸಂಘಟಕರಾದ ಬಿಪಿನ್ ಮುಂಡೆ ಹಾಗೂ ಶೇಖರ ಮುಂಡೆ ಮಾತನಾಡಿ ಕಳೆದ ೬ ವರ್ಷಗಳಿಂದ ಪ್ರಭುವಾಡಿಯಲ್ಲಿ ಈ ದಿಂಡಿ ಉತ್ಸವವನ್ನು ಭಕ್ತಿಭಾವದಿಂದ ಸತತವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಮಹಿಳೆಯರು, ಹಿರಿಯರು ಹಾಗೂ ಯುವಕರು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿರುವುದು ಸಂತಸದ ವಿಷಯ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಯುವ ಪೀಳಿಗೆಯನ್ನು ದುಶ್ಚಟಗಳಿಂದ ದೂರವಿಟ್ಟು ಆಧ್ಯಾತ್ಮಿಕ ಹಾಗೂ ಸನ್ಮಾರ್ಗದತ್ತ ಸಾಗಲು ಪ್ರೇರೇಪಿಸುತ್ತವೆ. ಮುಂದಿನ ದಿನಗಳಲ್ಲೂ ಈ ಪರಂಪರೆಯನ್ನು ಇನ್ನಷ್ಟು ವಿಜೃಂಭಣೆಯಿಂದ ಮುಂದುವರಿಸಲಾಗುವುದು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ನಗರಸಭೆ ಅಧ್ಯಕ್ಷ ರಾಮಾ ಮಾನೆ, ಮಾಜಿ ಪುರಸಭೆ ಸದಸ್ಯ ಅನಿಲ್ ಮಾನೆ, ವಿಶ್ವನಾಥ್ ಕಾಮಗೌಡ ಹಾಗೂ ಸಚಿನ್ ಮಾನೆ ಭಾಗವಹಿಸಿದ್ದರು.

ಅದಲ್ಲದೆ ಬಿಪಿನ್ ಮುಂಡೆ, ಶೇಖರ್ ಮುಂಡೆ, ಸಂಜಯ್ ಮುಂಡೆ, ಸಂಜಯ್ ವರ್ಗೆ, ಶ್ರೀಧರ್ ನಾಯಕ, ಕುಮಾರ ಪವಾರ್, ವೈಭವ ಮಾನೆ, ಜ್ಯೋತಿಬಾ ಪವಾರ, ಬಾಬು ಟವಳೆ, ಸೂರಜ ಪವಾರ, ರಾಜು ವರ್ಗೆ, ರಾಹುಲ್ ಜಾಧವ್, ಇಕ್ಬಾಲ್ ಹಾವರೆ, ಚಂದು ಮೋಹಿತೆ, ಶಂಕರ್ ಜಾಧವ್, ಋತುರಾಜ್ ಹರಿಹರ್, ಸುನಿಲ್ ಕದಂ, ಬಾಳು ಪವಾರ್ ಸೇರಿದಂತೆ ನವಯುಗ ಗಜಾನನ ಮಂಡಳಿ ಯ ಸದಸ್ಯರು ಹಾಗೂ ಪ್ರಭುವಾಡಿಯ ನೂರಾರು ನಾಗರಿಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Tags:

error: Content is protected !!