ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಶವ ಬಾವಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಬೇಡಕಿಹಾಳ ಗ್ರಾಮದ ನಿವಾಸಿ ಅಮೀತ ಅಶೋಕ್ ಚೌಗಲೆ (36) ಮೃತಪಟ್ಟ ದುರ್ದೈವಿ.ಮೃತ ಅಮೀತ್ ಕಳೆದ ಒಂದು ವಾರದಿಂದ ಕಾಣೆಯಾಗಿದ್ದರು. ಶನಿವಾರ ಗ್ರಾಮದ ಸಂದೀಪ್ ಪಾಟೀಲ್ ಎಂಬುವರಿಗೆ ಸೇರಿದ ಬಾವಿಯಲ್ಲಿ ಇವರ ಶವ ತೇಲುತ್ತಿರುವುದು ಕಂಡುಬಂದಿದೆ. ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಸಮಾಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಾವಿಯಲ್ಲಿದ್ದ ಮೃತದೇಹವನ್ನು ಹೊರತೆಗೆದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸದಲಗಾ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆಯ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
