ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ನಡೆದಿರುವುದನ್ನು ಖಂಡಿಸಿ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ ಹಿನ್ನೆಲೆಯಲ್ಲಿ ಬೆಳಗಾವಿ ಕಾಂಗ್ರೆಸ್ ಭವನದ ಎದುರು ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.


ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ನಿರ್ಲಕ್ಷ್ಯ ಮಾಡಿದ್ದ ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿತ್ತು. ದೆಹಲಿಯಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದರೂ ಸ್ಪಂದಿಸದ ಕೇಂದ್ರ ಸರಕಾರದ ವಿರುದ್ಧ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೋರಾಟದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ಈಗ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾಗಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿರುವುದಕ್ಕೆ ಸಂಭ್ರಮಿಸಿದರು.
ಇಂದಿನ ನಿರ್ಧಾರವು ಭಾರತದ ಯುವಕರಿಗೆ ಸಿಕ್ಕ ದೊಡ್ಡ ಜಯವಾಗಿದ್ದು, ಜಂತರ್ ಮಂತರ್ನಲ್ಲಿ ಮುಗ್ಧ ಯುವಕರ ಮೇಲೆ ದೌರ್ಜನ್ಯ ಎಸಗಿದ ಬಿಜೆಪಿ ಸರ್ಕಾರದ ನಿಜವಾದ ಬಣ್ಣ ಈಗ ಯುವಜನತೆಗೆ ಗೊತ್ತಾಗಿದೆ. ಇನ್ಮುಂದೆ ದೇಶದ ರಾಜಕೀಯ ಚಿತ್ರಣ ಬದಲಾಗಲಿದ್ದು, ಬಿಜೆಪಿ ಪಕ್ಷವನ್ನು ಭಾರತದಿಂದ ತೊಲಗಿಸುವ ಕೆಲಸವನ್ನು ದೇಶದ ಯುವಕರು ಮಾಡಲಿದ್ದಾರೆಂದು ರಾಜಾ ಸಲೀಂ ಕಾಶಮ್ಮನವರ ಹೇಳಿದರು.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ಯುವಕರಿಗೆ ಸಿಕ್ಕ ದೊಡ್ಡ ಜಯವಾಗಿದ್ದು, ಕೇಂದ್ರ ಸರ್ಕಾರದ ಮೇಲಿದ್ದ ಭರವಸೆ ಸುಳ್ಳಾಗಿದೆ ಎಂದು ಹೇಳಿದರು. ಯುವಕರಿಗೆ ಆದ ಅನ್ಯಾಯದ ವಿರುದ್ಧ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯವರು ನಿರಂತರವಾಗಿ ಬೆಂಬಲ ನೀಡಲಿದ್ದಾರೆ ಎಂದು ಇನ್ನೋರ್ವರು ತಿಳಿಸಿದರು.
ಆಯೇಷಾ ಸನದಿ ಮಾತನಾಡಿ ಇಂದು ವಿದ್ಯಾರ್ಥಿಗಳು ಹಾಗೂ ಯುವಕರ ಹೋರಾಟಕ್ಕೆ ಜಯ ಸಿಕ್ಕಿದ್ದು, ಸತ್ಯಕ್ಕೆ ನ್ಯಾಯ ಸಿಕ್ಕಿದ ಅತ್ಯಂತ ಸಂತೋಷದ ದಿನವಾಗಿದೆ. ಯುವಜನರ ಪರವಾಗಿ ಧೃಡವಾಗಿ ನಿಂತು ಹೋರಾಡಿದ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳು ಹಾಗೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಅಡಿವೇಶ ಇಟಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
