ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ತಡರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಬಾರ್ ಒಂದರ ಮುಂದೆ ನಿಲ್ಲಿಸಲಾಗಿದ್ದ ಎಕ್ಸ್ಯುವಿ300 ಕಾರು ಏಕಾಏಕಿ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದ್ದು, ಸ್ಥಳದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಯಾರೋ ಕಾರಿನಲ್ಲಿ ಬಾಂಬ್ ಇಟ್ಟಿರಬಹುದು ಎಂದು ಕಾರಿನ ಮಾಲೀಕ ಶಂಕೆ ವ್ಯಕ್ತಪಡಿಸಿದ್ದು, ಘಟನಾ ಸ್ಥಳಕ್ಕೆ ಬೆಳಗಾವಿಯ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ತನಿಖೆ ಕೈಗೊಂಡಿದೆ.

ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ತಡರಾತ್ರಿ 10:30ರ ಸುಮಾರಿಗೆ ಬಾರ್ ಬಂದ್ ಮಾಡುವ ವೇಳೆಯಲ್ಲಿ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಕಾರು ಸುಮಾರು 10 ಅಡಿ ಎತ್ತರಕ್ಕೆ ಹಾರಿ ಸಂಪೂರ್ಣವಾಗಿ ಛಿದ್ರಛಿದ್ರಗೊಂಡಿದ್ದು, ಅದರ ಅವಶೇಷಗಳು 200 ಅಡಿ ದೂರದವರೆಗೆ ಎಸೆಯಲ್ಪಟ್ಟಿವೆ. ಈ ವೇಳೆ ಕಾರಿನ ಅವಶೇಷಗಳು ಬಡಿದು ಓರ್ವ ವ್ಯಕ್ತಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟದ ರಭಸಕ್ಕೆ ಸುತ್ತಮುತ್ತಲ ಪ್ರದೇಶದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸ್ಥಳೀಯರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ಕೇವಲ ಒಂದೇ ಸೆಕೆಂಡ್ನಲ್ಲಿ ಕಾರು ಸ್ಫೋಟಗೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತೀವ್ರತೆಗೆ ಸಿಸಿಟಿವಿ ಸ್ಕ್ರೀನ್ ಕೂಡ ಕ್ರ್ಯಾಶ್ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಬಾಗಲಕೋಟೆ ಪೊಲೀಸರು ಹಾಗೂ ಬೆಳಗಾವಿಯ ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
