ಉತ್ತರ ಕರ್ನಾಟಕದ ಭಾಗಕ್ಕೆ ಸಂಪರ್ಕ ವ್ಯವಸ್ಥೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ನಗರಗಳಿಂದ ದೆಹಲಿಗೆ ನೇರ ವಿಮಾನ ಪ್ರಯಾಣ ಬೆಳೆಸಲು ಕಾಯುತ್ತಿದ್ದ ಪ್ರಯಾಣಿಕರಿಗೆ ಇಂಡಿಗೋ ಏರ್‌ಲೈನ್ಸ್ ಸಿಹಿ ಸುದ್ದಿ ನೀಡಿದೆ. ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಈ ಮಾರ್ಗಗಳಲ್ಲಿ ದೈನಂದಿನ ವಿಮಾನ ಸೇವೆ ಪ್ರಾರಂಭವಾಗಲಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಇಂಡಿಗೋ ಸಂಸ್ಥೆಯು ಅಕ್ಟೋಬರ್ 1ರಿಂದ ದೆಹಲಿ-ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ ಸೇವೆಯನ್ನು ಪ್ರಕಟಿಸಿದೆ. ಸಮಯಸೂಚಿಯಂತೆ Flight No: 6E7588 ದೆಹಲಿಯಿಂದ ಸಂಜೆ 4:30ಕ್ಕೆ ಹೊರಟು 6:55ಕ್ಕೆ ಹುಬ್ಬಳ್ಳಿ ತಲುಪಲಿದ್ದು, Flight No: 6E2115 ಸಂಜೆ 7:30ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 10:05ಕ್ಕೆ ದೆಹಲಿ ತಲುಪಲಿದೆ. ಅದೇ ರೀತಿ ಬೆಳಗಾವಿ ಮಾರ್ಗದಲ್ಲಿ Flight No: 6E2511 ಬೆಳಿಗ್ಗೆ 6:15ಕ್ಕೆ ದೆಹಲಿಯಿಂದ ಹೊರಟು 8:40ಕ್ಕೆ ಬೆಳಗಾವಿ ತಲುಪಿದರೆ, Flight No: 6E2512 ಬೆಳಿಗ್ಗೆ 9:10ಕ್ಕೆ ಬೆಳಗಾವಿಯಿಂದ ಹೊರಟು 11:40ಕ್ಕೆ ದೆಹಲಿಗೆ ತಲುಪಲಿದೆ. ಈ ನಿರಂತರ ವಿಮಾನ ಸಂಚಾರದಿಂದ ಉತ್ತರ ಕರ್ನಾಟಕದಲ್ಲಿ ವ್ಯಾಪಾರ, ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಬಲ ಸಿಗಲಿದೆ.

