ಮಹಾರಾಷ್ಟ್ರದ ತುಳಜಾಪುರದ ಶ್ರೀ ಕ್ಷೇತ್ರದಲ್ಲಿ ನೆಲೆಸಿರುವ ಆದಿಶಕ್ತಿ ತಾಯಿ ತುಳಜಾಭವಾನಿಯ ದರ್ಬಾರು ಎಂದರೆ ಭಕ್ತಿ, ಶಕ್ತಿ ಮತ್ತು ಶ್ರದ್ಧೆಯ ಸಂಗಮ. ಇಲ್ಲಿ ತಾಯಿಯ ಸನ್ನಿಧಿಯಲ್ಲಿ ನಡೆಯುವ ಕುಂಕುಮದ ಮುಕ್ತ ಉಧಳಣೆ ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ. ಹಾಗಾದರೆ, ತಾಯಿಯ ದರ್ಬಾರದಲ್ಲಿ ಕುಂಕುಮವನ್ನು ಇಷ್ಟೊಂದು ಭಕ್ತಿಭಾವದಿಂದ ಏಕೆ ಎರಚಲಾಗುತ್ತದೆ? ಇದರ ಹಿಂದಿರುವ ಧಾರ್ಮಿಕ ನಂಬಿಕೆ ಏನು? ಬನ್ನಿ, ನೋಡೋಣ ಈ ಇಲ್ಲಿದೆ ಒಂದು ವಿಶೇಷ ವರದಿ.
ಹೌದು… ರಕ್ತಬೀಜ ರಾಕ್ಷಸನ ಸಂಹಾರ… ಅಧರ್ಮದ ವಿರುದ್ಧ ಧರ್ಮದ ವಿಜಯ… ದುಷ್ಟಶಕ್ತಿಗಳ ವಿರುದ್ಧ ಆದಿಶಕ್ತಿಯ ಪರಾಕ್ರಮ! ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ತಾಯಿ ಆದಿಶಕ್ತಿಯು ದುಷ್ಟಶಕ್ತಿಗಳನ್ನು ಸಂಹರಿಸಿ ಧರ್ಮವನ್ನು ರಕ್ಷಿಸುವ ಶಕ್ತಿಸ್ವರೂಪಿಣಿ ಎಂದು ಆರಾಧಿಸಲ್ಪಡುತ್ತಾಳೆ. ರಕ್ತಬೀಜ ರಾಕ್ಷಸನ ಸಂಹಾರದ ಕಥೆಯೂ ಶಕ್ತಿಯ ಆರಾಧನೆಯೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ತಾಯಿ ತುಳಜಾಭವಾನಿಯ ದರ್ಬಾರದಲ್ಲಿ ಭಕ್ತರು ಕುಂಕುಮವನ್ನು ಎರಚುವಾಗ, ಅದನ್ನು ಕೇವಲ ಒಂದು ಆಚರಣೆಯಾಗಿ ನೋಡುವುದಿಲ್ಲ. ಕುಂಕುಮವು ಶಕ್ತಿ, ಮಂಗಳ, ಸೌಭಾಗ್ಯ ಮತ್ತು ವಿಜಯದ ಸಂಕೇತ ಎಂಬ ಧಾರ್ಮಿಕ ಭಾವನೆ ಭಕ್ತರಲ್ಲಿದೆ. ತಾಯಿಯ ಪಾದಗಳಿಗೆ ಸಮರ್ಪಿಸುವ ಕುಂಕುಮದಲ್ಲಿ ತಮ್ಮ ಭಕ್ತಿ, ಪ್ರಾರ್ಥನೆ ಮತ್ತು ಅಚಲ ಶ್ರದ್ಧೆಯನ್ನು ಭಕ್ತರು ವ್ಯಕ್ತಪಡಿಸುತ್ತಾರೆ.
ಇನ್ನೂ ತಾಯಿಯ ದರ್ಬಾರದಲ್ಲಿ ಕುಂಕುಮದ ಕೆಂಪು ಬಣ್ಣ ಎಲ್ಲೆಡೆ ಹರಡುತ್ತಿದ್ದಂತೆ, ಭಕ್ತರ ಮನದಲ್ಲೂ ಭಕ್ತಿಯ ಭಾವನೆ ಉಕ್ಕಿ ಹರಿಯುತ್ತದೆ. ಜೈ ಭವಾನಿ… ಜೈ ತುಳಜಾಭವಾನಿ… ಎಂಬ ಜಯಘೋಷದ ನಡುವೆ ಕುಂಕುಮದ ಉಧಳಣೆ ಭಕ್ತರ ಪಾಲಿಗೆ ಶಕ್ತಿಯ ಆರಾಧನೆಯ ವಿಶಿಷ್ಟ ಕ್ಷಣವಾಗುತ್ತದೆ. ಕೆಲವರಿಗೆ ಇದು ವಿಜಯದ ಸಂಕೇತ… ಇನ್ನು ಕೆಲವರಿಗೆ ತಾಯಿಯ ಕೃಪೆಯ ಮೇಲಿನ ಅಚಲ ವಿಶ್ವಾಸ. ಸಂಕಷ್ಟಗಳು ದೂರವಾಗಲಿ, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿ, ಬದುಕಿನಲ್ಲಿ ಸಮೃದ್ಧಿ ಬರಲಿ ಎಂಬ ಪ್ರಾರ್ಥನೆ ಯೊಂದಿಗೆ ಭಕ್ತರು ತಾಯಿಯ ದರ್ಶನ ಪಡೆಯುತ್ತಾರೆ. ಕುಂಕುಮದ ಪ್ರತಿಯೊಂದು ಕಣದಲ್ಲೂ ತಾಯಿಯ ಶಕ್ತಿಯನ್ನು ಕಾಣುವ ಭಕ್ತರಿಗೆ ಈ ಸಂಪ್ರದಾಯ ಕೇವಲ ಆಚರಣೆಯಲ್ಲ, ಅದು ಭಾವನೆ, ನಂಬಿಕೆ ಮತ್ತು ಪರಂಪರೆಯ ಪ್ರತಿಬಿಂಬವಾಗಿದೆ.
ಒಟ್ನಲ್ಲಿ, ಕುಂಕುಮದ ಕೆಂಪು ಬಣ್ಣದಲ್ಲಿ ಶಕ್ತಿಯ ಆರಾಧನೆ… ತಾಯಿಯ ದರ್ಶನದಲ್ಲಿ ಮನಸ್ಸಿಗೆ ನೆಮ್ಮದಿ… ಜಯಘೋಷದಲ್ಲಿ ಭಕ್ತಿಯ ಪರವಶತೆ! ಇವೆಲ್ಲವೂ ತುಳಜಾಭವಾನಿ ತಾಯಿಯ ದರ್ಬಾರಿನ ವಿಶೇಷತೆಗಳು. ಧಾರ್ಮಿಕ ನಂಬಿಕೆ ಮತ್ತು ತಲೆಮಾರುಗಳಿಂದ ಬಂದ ಪರಂಪರೆಯನ್ನು ಜೀವಂತವಾಗಿರಿಸುವ ಈ ಭಕ್ತಿಯ ಸಂಭ್ರಮ ಭಕ್ತರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
