ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರವಾಗಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಸ್ಟಿಂಗ್ ಆಪರೇಷನ್ ಮಾಡುವವರ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಿಂಗ್ ಅನ್ನೋದು ರಾಜ್ಯಕ್ಕೆ ಶಾಪವಿದ್ದಂತೆ, ಇದರಿಂದ ಹೊರಬರಬೇಕಿದೆ ಎಂದು ಹೇಳಿರುವ ಅವರು, ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸ್ಟಿಂಗ್ ಆಪರೇಷನ್ ಮಾಡುವವರು ಯಾರೇ ಆಗಿರಲಿ, ಅವರನ್ನು ಒದ್ದು ಒಳಗೆ ಹಾಕಬೇಕು ಎಂದು ಕಿಡಿಕಾರಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆಯಾಗಲಿ, ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು. ಸ್ಟಿಂಗ್ ಆಪರೇಷನ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬ್ಬು ಬೆಳೆಗಾರರ ಹೋರಾಟದ ಸ್ಥಳಕ್ಕೆ ಯಾರ ಒತ್ತಾಯಕ್ಕೂ ಮಣಿದು ಹೋಗಿಲ್ಲ. ರೈತರ ಹೋರಾಟದ ಸ್ಥಳಕ್ಕೆ ಅವರಾಗಿಯೇ ತೆರಳಿದ್ದಾರೆ. ವಿಜಯದಶಮಿ ಮುಗಿಯುವವರೆಗೆ ಶಾಂತವಾಗಿರಿ, ಬಳಿಕ ಚರ್ಚೆ ಮಾಡೋಣ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಮಾತಿಗೆ ಗೌರವ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.
ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯನ್ನು ಸ್ವಾಗತಿಸುವುದಾಗಿ ತಿಳಿಸಿದ ಎಂ.ಬಿ. ಪಾಟೀಲ್, ಸಮಿತಿಯು ವೈಜ್ಞಾನಿಕವಾಗಿ ಕಾರ್ಯನಿರ್ವಹಿಸಿ ಆದಷ್ಟು ಬೇಗ ವರದಿ ನೀಡಬೇಕು ಎಂದರು. ಸಮಿತಿಯ ಕೆಲಸಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ರೈತರು ಸಮಿತಿಗೆ ಕಾಲಾವಕಾಶ ನೀಡಬೇಕು. ಅದಕ್ಕಾಗಿ ಒಂದು ಗಡುವು ನಿಗದಿಪಡಿಸಬೇಕು. ಆ ಗಡುವಿನೊಳಗೆ ಸೂಕ್ತ ಪರಿಹಾರ ಸಿಗದಿದ್ದರೆ ರೈತರು ಹೋರಾಟ ಮುಂದುವರಿಸಬಹುದು ಎಂದು ಸಲಹೆ ನೀಡಿದರು. ಸಮಿತಿಯ ವರದಿ ಬಂದ ಬಳಿಕ ಅದು ರೈತರಿಗೆ ಅನುಕೂಲಕರ ವಾಗಿಲ್ಲವೆಂದು ಕಂಡುಬಂದರೆ ಹೋರಾಟ ನಡೆಸಬಹುದು. ಕಬ್ಬು ಬೆಳೆಗಾರರಿಗೆ ನ್ಯಾಯಯುತ ಲಾಭ ಸಿಗಬೇಕು, ಅದೇ ರೀತಿ ಸಕ್ಕರೆ ಕಾರ್ಖಾನೆಗಳಿಗೂ ಅನುಕೂಲವಾಗಬೇಕು. ರೈತ ಮುಖಂಡರಾದ ಚುನ್ನಪ್ಪ ಹಾಗೂ ಗುರುಜಿಗಳು ನನಗೆ ಪರಿಚಯವಿದ್ದು, ಅವರೊಂದಿಗೆ ಈ ವಿಚಾರವಾಗಿ ಮಾತನಾಡುತ್ತೇನೆ ಎಂದು ತಿಳಿಸಿದರು.
