ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಾರ್ವಭೌಮ ಸಂಸ್ಥೆಯಾಗಿದ್ದು, ಇಡೀ ಕರ್ನಾಟಕದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ ಸಾಹಿತಿ ಡಾ. ಸರಜೂ ಕಾಟಕರ ಪ್ರತಿಪಾದಿಸಿದರು..

ಬೆಳಗಾವಿಯ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಈ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಪರಿಷತ್ತಿನ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಸರಜೂ ಕಾಟಕರ, ಆರಂಭವಾಗಿ 100 ವರ್ಷ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ಮಾತನಾಡಿದರೆ ಅದು ಇಡೀ ಕರ್ನಾಟಕ ಮತ್ತು ಕನ್ನಡಿಗರು ಮಾತನಾಡಿದಂತೆ. ಹಿಂದೆ ಜಿ. ನಾರಾಯಣ ಅವರು ಅಧ್ಯಕ್ಷರಿದ್ದಾಗ ಕೇವಲ ಒಂದು ರೂಪಾಯಿ ಸದಸ್ಯತ್ವದ ಮೂಲಕ ಐದು ಲಕ್ಷ ಸದಸ್ಯರನ್ನು ಸೇರ್ಪಡೆಗೊಳಿಸುವ ಮಹತ್ವಾಕಾಂಕ್ಷೆಯ ಪ್ರಚಾರ ನಡೆದಿತ್ತು ಎಂದು ಪರಿಷತ್ತಿನ ಐತಿಹಾಸಿಕ ಬೆಳವಣಿಗೆಯನ್ನು ಸ್ಮರಿಸಿದರು. ಮುಂದುವರಿದು ಮಾತನಾಡಿದ ಅವರು, 1984ರಲ್ಲಿ ಗೋಕಾಕ್ ಚಳುವಳಿಯ ಮೂಲಕ ಕರ್ನಾಟಕದಲ್ಲಿ ಕನ್ನಡದ ದೊಡ್ಡ ಜನಜಾಗೃತಿ ಮೂಡಿಬಂತು. ಧಾರವಾಡದ ವಿದ್ಯಾವರ್ಧಕ ಸಂಘವು ಈ ಐತಿಹಾಸಿಕ ಚಳುವಳಿಯ ಕೇಂದ್ರಬಿಂದುವಾಗಿತ್ತು. ಅಲ್ಲಿಂದ ಪ್ರಾರಂಭವಾದ ಈ ಚಳುವಳಿ ಇಡೀ ರಾಜ್ಯಕ್ಕೆ ವ್ಯಾಪಿಸಿ, ಅಂದು ಕನ್ನಡವನ್ನು ವಿರೋಧಿಸಿದ್ದ ಸರ್ಕಾರವನ್ನೇ ಕೆಳಗಿಳಿಸುವಷ್ಟು ಪ್ರಭಾವಶಾಲಿಯಾಗಿ ಮೂಡಿಬಂದಿತ್ತು ಎಂದು ಗೋಕಾಕ್ ಚಳುವಳಿಯ ಮಹತ್ವವನ್ನು ಬಣ್ಣಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಸರಜೂ ಕಾಟಕರ, ಅತಿಥಿಗಳಾಗಿ ಡಾ. ಬಿ.ಎಚ್. ಮೆಟಗುಡ್ಡ, ಡಾ. ವನಿತಾ ಮೆಟಗುಡ್ಡ, ಹಾಗೂ ಸಾಹಿತಿ ಯ.ರು. ಪಾಟೀಲ ಉಪಸ್ಥಿತರಿದ್ದರು. ಇದೇ ವೇಳೆ ಮಲ್ಲಿಕಾರ್ಜುನ ಕನಶೆಟ್ಟಿ, ಸುರೇಶ್ ಹಂಜಿ, ಈರಣಗೌಡ ಪಾಟೀಲ್, ಮತ್ತು ಡಾ. ಯಲ್ಲಪ್ಪ ಯಾಕೊಳ್ಳಿ ಸೇರಿದಂತೆ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಕೆ.ಎ.ದಯಾನಂದ, ಎಂ.ವೈ ಮೆಣಸಿನಕಾಯಿ, ರತ್ನಪ್ರಭಾ ಬೆಲ್ಲದ, ವೀರಭದ್ರ ಅಂಗಡಿ, ಹಾಗೂ ಸುನೀಲ್ ಹಲವಾಯಿ ಶ್ರಮಿಸಿದರು.
