Vijaypura

ಟಿವಿ ಧಾರಾವಾಹಿಗಿಂತ ದೇವಿಯ ಆರಾಧನೆಯೇ ಮುಖ್ಯ; ಸಂಪ್ರದಾಯಕ್ಕೆ ಮನ್ನಣೆ ನೀಡಿದ ವನಿತೆಯರು!

Share

ನವರಾತ್ರಿ ಸಂಭ್ರಮದಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಮಹಿಳೆಯರು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬನ್ನಿ ಗಿಡದ ಪೂಜೆ, ಮುತ್ತೈದೆಯರಿಗೆ ಉಡಿ ತುಂಬುವ ಮೂಲಕ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಮಹಿಳೆಯರ ಈ ಭಕ್ತಿ ಮತ್ತು ಸಂಪ್ರದಾಯದ ಪಾಲನೆಯ ಕುರಿತಾದ ವಿಶೇಷ ವರದಿ ಇಲ್ಲಿದೆ.

ಹೌದು…ನವರಾತ್ರಿ ಬಂತೆಂದರೆ ಸಾಕು… ಮನೆಮನೆಗಳಲ್ಲಿ ಹಬ್ಬದ ಸಂಭ್ರಮ, ದೇವಿಯ ಆರಾಧನೆಯ ಸಡಗರ. ಬೆಳಗ್ಗೆ ಎದ್ದು ದೇವರಿಗೆ ಪೂಜೆ ಸಲ್ಲಿಸುವುದು, ಹೂವು- ಕುಂಕುಮಗಳಿಂದ ದೇವಿಯನ್ನು ಅಲಂಕರಿಸುವುದು, ಭಜನೆ ಮಾಡುವುದು, ಉಪವಾಸ ವ್ರತಗಳನ್ನು ಆಚರಿಸುವುದು… ಹೀಗೆ ಮಹಿಳೆಯರ ದಿನಚರಿಯೇ ಭಕ್ತಿಮಯವಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಟಿವಿ ಧಾರಾವಾಹಿಗಳು ಹಾಗೂ ಮೊಬೈಲ್‌ಗಳಲ್ಲಿ ಸಮಯ ಕಳೆಯುವವರ ಸಂಖ್ಯೆ ಹೆಚ್ಚಾಗಿದ್ದರೂ, ನವರಾತ್ರಿ ಸಂದರ್ಭದಲ್ಲಿ ಮಹಿಳೆಯರು ಇವೆಲ್ಲವನ್ನೂ ಬದಿಗಿಟ್ಟು ಧಾರ್ಮಿಕ ಆಚರಣೆಗಳಿಗೆ ಸಮಯ ಮೀಸಲಿಡುತ್ತಿದ್ದಾರೆ. ಪೂಜೆ-ಪುನಸ್ಕಾರಗಳಲ್ಲಿ ಪಾಲ್ಗೊಳ್ಳುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಲು ಶ್ರದ್ಧೆಯಿಂದ ಪ್ರಾರ್ಥಿಸುತ್ತಿದ್ದಾರೆ. ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ, ಕುಟುಂಬಕ್ಕೆ ಒಳಿತಾಗಲಿ, ಮನೆಯಲ್ಲಿ ಸುಖ-ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ತಲೆಮಾರುಗಳಿಂದ ನಡೆದುಕೊಂಡು ಬಂದ ಧಾರ್ಮಿಕ ಸಂಪ್ರದಾಯಗಳನ್ನು ಇಂದಿಗೂ ಅಷ್ಟೇ ಭಕ್ತಿಭಾವದಿಂದ ಪಾಲಿಸುತ್ತಿರುವುದು ವಿಶೇಷ. ಇದಲ್ಲದೇ ಗಂಟೆಗಟ್ಟಲೇ ಲಲಿತಾ ಸಹಸ್ರನಾಮ ಪಠಿಸುತ್ತಿದ್ದಾರೆ.

ಅಲ್ಲದೇ ನವರಾತ್ರಿಯ ಪ್ರಮುಖ ಸಂಪ್ರದಾಯಗಳಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಆಚರಣೆಯೂ ಒಂದು. ಅರಿಶಿನ, ಕುಂಕುಮ, ಬಳೆ, ಹೂವು ಹಾಗೂ ತಾಂಬೂಲ ನೀಡಿ ಮುತ್ತೈದೆಯರನ್ನು ಗೌರವಿಸುವ ಮಹಿಳೆಯರು, ಅವರ ಮಾಂಗಲ್ಯ ಭಾಗ್ಯ ಸದಾ ಗಟ್ಟಿಯಾಗಿರಲಿ, ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತಾರೆ. ಪರಸ್ಪರ ಅರಿಶಿನ-ಕುಂಕುಮ ವಿನಿಮಯ ಮಾಡಿಕೊಳ್ಳುತ್ತಾ, ಶುಭ ಹಾರೈಸುತ್ತಾ ಮಹಿಳೆಯರು ಭಕ್ತಿ ಮತ್ತು ಬಾಂಧವ್ಯವನ್ನು ಬೆಸೆಯುತ್ತಾರೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ; ಮಹಿಳೆಯರ ನಡುವಿನ ಪ್ರೀತಿ, ಗೌರವ ಹಾಗೂ ಸೌಹಾರ್ದದ ಸಂಕೇತವೂ ಹೌದು. ಒಂದು ಕಾಲದಲ್ಲಿ ಅಜ್ಜಿ-ತಾಯಂದಿರಿಂದ ಕಲಿತ ಸಂಪ್ರದಾಯಗಳನ್ನು ಇಂದು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೂ ಪರಿಚಯಿಸುತ್ತಿದ್ದಾರೆ. ಪೂಜೆ ಹೇಗೆ ಮಾಡಬೇಕು, ಹಬ್ಬಗಳನ್ನು ಹೇಗೆ ಆಚರಿಸಬೇಕು, ಹಿರಿಯರಿಗೆ ಹೇಗೆ ಗೌರವ ನೀಡಬೇಕು ಎಂಬುದನ್ನು ತಮ್ಮ ಆಚರಣೆಗಳ ಮೂಲಕವೇ ಮುಂದಿನ ಪೀಳಿಗೆಗೆ ತಿಳಿಸುತ್ತಿದ್ದಾರೆ. ಇನ್ನೂ ಆಧುನಿಕ ಜೀವನಶೈಲಿಯ ನಡುವೆಯೂ ನಮ್ಮ ಸಂಸ್ಕೃತಿಯ ಬೇರುಗಳನ್ನು ಮರೆಯದೆ, ಧಾರ್ಮಿಕ ಆಚರಣೆಗಳಿಗೆ ಆದ್ಯತೆ ನೀಡುತ್ತಿರುವ ಮಹಿಳೆಯರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸಂಪ್ರದಾಯಗಳನ್ನು ಕೇವಲ ಪಾಲಿಸುವುದಷ್ಟೇ ಅಲ್ಲ, ಅವುಗಳನ್ನು ಮುಂದಿನ ಪೀಳಿಗೆಗೂ ತಲುಪಿಸುವ ಜವಾಬ್ದಾರಿಯನ್ನು ಮಹಿಳೆಯರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಒಟ್ಟಾರೆ, ಕಾಲ ಬದಲಾದರೂ ಸಂಸ್ಕೃತಿ ಮತ್ತು ಸಂಪ್ರದಾಯಗಳು ಮರೆಯಾಗಬಾರದು. ಬನ್ನಿ ಗಿಡದ ಪೂಜೆ, ಮುತ್ತೈದೆಯರಿಗೆ ಉಡಿ ತುಂಬುವಂತಹ ಆಚರಣೆಗಳ ಮೂಲಕ ನಮ್ಮ ಧಾರ್ಮಿಕ ಪರಂಪರೆಯನ್ನು ಜೀವಂತ ವಾಗಿರಿಸುತ್ತಿರುವ ಮಹಿಳೆಯರ ಭಕ್ತಿ ಮತ್ತು ಶ್ರದ್ಧೆ ಹೀಗೆಯೇ ಮುಂದುವರಿಯಲಿ. ನಮ್ಮ ಸಂಸ್ಕೃತಿ, ಸಂಪ್ರದಾಯಗಳು ತಲೆಮಾರಿನಿಂದ ತಲೆಮಾರಿಗೆ ಉಳಿದು ಬೆಳೆಯಲಿ ಎಂಬ ಸಂಕಲ್ಪ ಮಾಡಿದಂತಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!