Kagawad

ಕಾಗವಾಡದಲ್ಲಿ ಕಬ್ಬು ಬೆಳೆಗಾರ ರೈತರ ಬೃಹತ್ ಪ್ರತಿಭಟನೆ: ₹5,500 ಬೆಂಬಲ ಬೆಲೆಗೆ ಆಗ್ರಹಿಸಿ ರಸ್ತೆ ತಡೆ

Share

ಕಬ್ಬು ಬೆಳೆಗಾರ ರೈತರಿಗೆ ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ, ಕಾಗವಾಡದ ರಾಣಿ ಚೆನ್ನಮ್ಮ ವೃತ್ತದಲ್ಲಿ ವಿವಿಧ ಗ್ರಾಮಗಳ ರೈತರು ಒಂದಾಗಿ ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್ ರವೀಂದ್ರ ಹಾದಿಮನಿ ಹಾಗೂ ಪಿಎಸ್‌ಐ ರಾಘವೇಂದ್ರ ಖೋತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಶುಕ್ರವಾರ ಮಧ್ಯಾಹ್ನ ಸಾಂಗ್ಲಿ–ಬೆಳಗಾವಿ, ಕಾಗವಾಡ–ವಿಜಯಪುರ ಹಾಗೂ ಕಾಗವಾಡ–ಜಮಖಂಡಿ ರಾಜ್ಯ ಹೆದ್ದಾರಿಗಳು ಕೂಡುವ ಕಾಗವಾಡದ ರಾಣಿ ಚೆನ್ನಮ್ಮ ವೃತ್ತದಲ್ಲಿ ರೈತರು ರಸ್ತೆ ತಡೆದು ಧರಣಿ ನಡೆಸಿದರು.

ಕಾಗವಾಡ ತಾಲೂಕು ಹಸಿರು ಸೇನೆ ರೈತ ಸಂಘದ ಮುಖಂಡ ಸುರೇಶ ಚೌಗುಲೆ, ಸ್ವಾಭಿಮಾನಿ ರೈತ ಸಂಘಟನೆಯ ಮುಖಂಡ ಮಹಾದೇವ ಉದಗಾವೆ, ನ್ಯಾಯವಾದಿ ಕಾಕಾ ಪಾಟೀಲ, ಅಜಿತ್ ಕರವ, ಹಸಿರು ಸೇನೆಯ ತಾಲೂಕು ಅಧ್ಯಕ್ಷ ಶರದ ಪಾಟೀಲ ಹಾಗೂ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಗವಾಡ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಆರ್. ರಾವ್ ಹಾಗೂ ಪದಾಧಿಕಾರಿಗಳು, ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಘಟಕಗಳ ಮುಖ್ಯಸ್ಥರು, ಉಗಾರದ ರೈತ ಹೋರಾಟಗಾರರು ಮತ್ತು ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕಬ್ಬು ನೀತಿ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ಕುರಿತು ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರೈತ ಹೋರಾಟಗಾರ ಸುರೇಶ ಚೌಗುಲೆ ಮಾತನಾಡಿ, “ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಹೋರಾಟ ಆರಂಭವಾಗಿದೆ. ಹೋರಾಟದ ಸ್ಥಳಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದಾರೆ. ಆದರೆ, ಕೇವಲ ಭೇಟಿ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ, ಕೃಷಿ ಸಚಿವರು ಹಾಗೂ ಪೆಟ್ರೋಲಿಯಂ ಸಚಿವರು ಪರಸ್ಪರ ಚರ್ಚಿಸಿ, ಪ್ರಧಾನಮಂತ್ರಿಗಳ ಅನುಮತಿ ಪಡೆದು ಕಬ್ಬಿನ ನ್ಯಾಯಯುತ ಬೆಲೆಯನ್ನು ಹೆಚ್ಚಿಸಿದರೆ ಮಾತ್ರ ರೈತರ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಈ ಬೇಡಿಕೆ ಈಡೇರುವವರೆಗೆ ರೈತರು ಕಬ್ಬು ಕಟಾವು ಮಾಡಬಾರದು ಹಾಗೂ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಆರಂಭಿಸಬಾರದು. ರೈತರು ಒಗ್ಗಟ್ಟಿನಿಂದ ಹೋರಾಟಕ್ಕೆ ಸಹಕರಿಸಬೇಕು” ಎಂದು ಮನವಿ ಮಾಡಿದರು.

ಕಬ್ಬು ಬೆಳೆಯ ಕುರಿತು ವಿಶೇಷ ಅಧ್ಯಯನ ನಡೆಸಿರುವ ಮಹಾದೇವ ಉದಗಾವೆ, ಶಶಿಕಾಂತ ಜೋಶಿ, ವೀರಭದ್ರ ಕಟಗೇರಿ, ನ್ಯಾಯವಾದಿ ರಾಹುಲ್ ಕಟಗೇರಿ, ನ್ಯಾಯವಾದಿ ಬಿ.ಆರ್. ರಾವ್, ಕಾಗವಾಡ ಘಟಕದ ಅಧ್ಯಕ್ಷ ಶರದ ಪಾಟೀಲ, ಉಪಾಧ್ಯಕ್ಷ ನಾನಾಸಾಹೇಬ ಶಿರಗೂರ, ವಿನಾಯಕ ಕಾಂಬಳೆ, ಬಸಗೌಡ ಪಾಟೀಲ, ಪ್ರಮೋದ್ ಪೂಜಾರಿ, ಸಿದ್ದು ಒಡೆಯರ್, ಗಣೇಶ ಕೋಳಿಕರ್, ಬಸವರಾಜ ಮಗದುಮ್, ಅರುಣ ಬಾಲಾಜಿ ಸಾಹುಕಾರ, ರಾವಸಾಬ್ ಜುಗುಳೆ ಹಾಗೂ ಆದಿನಾಥ ಬಿಂದಿಗೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ರೈತರು ಪಾಲ್ಗೊಂಡಿದ್ದರು.

ವರದಿ: ಸುಕುಮಾರ ಬನ್ನುರೆ, ಇನ್ ನ್ಯೂಸ್, ಕಾಗವಾಡ.

Tags:

error: Content is protected !!