Kagawad

ಉಗಾರದಲ್ಲಿ ಸೇವಾ ಸೇತು ಅಭಿಯಾನ: ‘ಪಿಎಂ ಸೂರ್ಯ ಘರ್’ ಯೋಜನೆಯ ಸದುಪಯೋಗಕ್ಕೆ ಕರೆ

Share

ಕೇಂದ್ರ ಸರ್ಕಾರದ ‘ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ಯ ಸದುಪಯೋಗವನ್ನು ರೈತರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು. ಈ ಯೋಜನೆಯಿಂದ ಪ್ರತಿಯೊಬ್ಬ ಗ್ರಾಹಕರಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಉಗಾರ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಪ್ಪಾಸಾಹೇಬ ಮಾಖಾನಿ ಹೇಳಿದರು.

ಶುಕ್ರವಾರದಂದು ಉಗಾರ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ನೂರಾರು ರೈತರು ಹಾಗೂ ಸಾರ್ವಜನಿಕರಿಗಾಗಿ ಉಗಾರದ ಶ್ರೀ ಹರಿ ವಿದ್ಯಾಲಯದ ವಿಹಾರ ಸಭಾಭವನದಲ್ಲಿ ‘ಸೇವಾ ಸೇತು ಅಭಿಯಾನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಸೋಲಾರ್ ಕಂಪನಿಗಳ ಪ್ರತಿನಿಧಿಗಳು, ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಹೆಸ್ಕಾಂ ಇಲಾಖೆಯ ಸಿಬ್ಬಂದಿ ಪಾಲ್ಗೊಂಡು ಸೌರಶಕ್ತಿ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಗವಾಡ ಶಾಸಕ ರಾಜು ಕಾಗೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪಾಸಾಹೇಬ ಮಾಖಾನಿ, “ರೈತರು ಹಾಗೂ ಗ್ರಾಹಕರು ತಮ್ಮ ಮನೆಗಳ ಮೇಲ್ಛಾವಣಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸುವ ಮೂಲಕ ಸೌರಶಕ್ತಿಯನ್ನು ಉತ್ಪಾದಿಸಬಹುದು. ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸರ್ಕಾರದ ಯೋಜನೆಯಡಿ ಆರ್ಥಿಕ ನೆರವು ಹಾಗೂ ಬ್ಯಾಂಕ್ ಸಾಲದ ಸೌಲಭ್ಯ ಪಡೆಯುವ ಅವಕಾಶವಿದೆ. ಉತ್ಪಾದಿಸಿದ ವಿದ್ಯುತ್‌ನಲ್ಲಿ ತಮ್ಮ ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಂಡು, ಹೆಚ್ಚುವರಿ ವಿದ್ಯುತ್ ಅನ್ನು ಹೆಸ್ಕಾಂಗೆ ಮಾರಾಟ ಮಾಡಬಹುದು. ಇದರಿಂದ ವಿದ್ಯುತ್ ವೆಚ್ಚ ಉಳಿತಾಯವಾಗುವುದರ ಜೊತೆಗೆ ಆರ್ಥಿಕ ಲಾಭವನ್ನೂ ಪಡೆಯಬಹುದು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು” ಎಂದು ಮನವಿ ಮಾಡಿದರು.

ಬೈಟ್:

ಸೇವಾ ಸೇತು ಅಭಿಯಾನದ ಅಂಗವಾಗಿ ಟಾಟಾ, ಸೌರದೀಪ, ವಿಂದಿಗಿರಿ ಸೇರಿದಂತೆ ವಿವಿಧ ಸೋಲಾರ್ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿ, ಸೌರಶಕ್ತಿ ವ್ಯವಸ್ಥೆಗಳ ಅಳವಡಿಕೆ, ಕಾರ್ಯನಿರ್ವಹಣೆ ಹಾಗೂ ಯೋಜನೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಂದಿಗಿರಿ ವೆಂಚುರಲ್ ಕಂಪನಿಯ ಪ್ರತಿನಿಧಿ ಪದ್ಮಜಿತ್ ಪಾಟೀಲ, ಟಾಟಾ ಕಂಪನಿಯ ಅರುಣ್ ಕುಟೊಳ್ಳಿ (ಚಿಕ್ಕೋಡಿ), ಸಂಜು ಬಾಲಾಜಿ (ಕುಡಚಿ), ಬಸವರಾಜ ಅಗಸರ ಸೇರಿದಂತೆ ಇತರರು ಗ್ರಾಹಕರಿಗೆ ಸೌರಶಕ್ತಿ ವ್ಯವಸ್ಥೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.

ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರರಾದ ಅಶೋಕ ಅರಳಿಕಟ್ಟಿ, ರಾಹುಲ್ ಚೌಹಾಣ್, ಮೋಹನ ರೋಗಿದಾಸ್ ಹಾಗೂ ಪ್ರವೀಣ ಗಾಯಕ್ವಾಡ ಅವರು ಆಗಮಿಸಿದ ರೈತರು ಮತ್ತು ಸಾರ್ವಜನಿಕರಿಗೆ ಸೌರಶಕ್ತಿಯ ಬಳಕೆ ಹಾಗೂ ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳುವ ಕುರಿತು ಮಾಹಿತಿ ನೀಡಿದರು.

– ಸುಕುಮಾರ ಬನ್ನುರೆ, ಇನ್ ನ್ಯೂಸ್, ಕಾಗವಾಡ

Tags:

error: Content is protected !!