ಶಕ್ತಿ ಸ್ವರೂಪಿಣಿ ಅಂಬಾಭವಾನಿಯ ಸನ್ನಿಧಿಯಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ಭಕ್ತಿ, ಶ್ರದ್ಧೆ, ಧಾರ್ಮಿಕ ವಿಧಿವಿಧಾನಗಳ ನಡುವೆ ತುಳಜಾಪುರದಲ್ಲಿ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ. ಇತ್ತ ಭಕ್ತರ ನಿಯಂತ್ರಣಕ್ಕೆ ಪೊಲೀಸ್ ಕಟ್ಟೆಚ್ಚರ, ಸುಗಮ ದರ್ಶನಕ್ಕೆ ಜಿಲ್ಲಾಡಳಿತದ ಸಿದ್ಧತೆ. ಈ ಎಲ್ಲದರ ನಡುವೆ ಅಕ್ಟೋಬರ್ 24ರಿಂದ ಆರಂಭವಾಗಲಿದೆ ತುಳಜಾಭವಾನಿ ಪಾದಯಾತ್ರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ…

ನಮ್ಮ ನೆರೆಯ ರಾಜ್ಯ ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆ… ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ತುಳಜಾಪುರ… ಭಕ್ತರ ಆರಾಧ್ಯ ದೈವ ಶ್ರೀ ತುಳಜಾಭವಾನಿ ದೇವಿಯ ಪುಣ್ಯಕ್ಷೇತ್ರ! ನವರಾತ್ರಿ ಬಂತೆಂದರೆ ಸಾಕು, ಈ ಕ್ಷೇತ್ರದಲ್ಲಿ ಭಕ್ತಿಯ ಸಂಭ್ರಮವೇ ಮನೆ ಮಾಡುತ್ತದೆ. ಘಟಸ್ಥಾಪನೆ… ನವರಾತ್ರಿ ದೀಪಾರಾಧನೆ… ಮಂತ್ರಘೋಷ… ದೇವಿಯ ನಾಮಸ್ಮರಣೆ… ಹೀಗೆ ಅಂಬಾಭವಾನಿಯ ಸನ್ನಿಧಿ ಆಧ್ಯಾತ್ಮಿಕ ವಾತಾವರಣದಿಂದ ಕಂಗೊಳಿಸುತ್ತಿದೆ. ಅಕ್ಟೋಬರ್ 11ರಂದು ಘಟಸ್ಥಾಪನೆ ಹಾಗೂ ದೇವಿಯ ಸಿಂಹಾಸನಾರೋಹಣ ದೊಂದಿಗೆ ಆರಂಭವಾದ ನವರಾತ್ರಿ ಉತ್ಸವದಲ್ಲಿ ಪ್ರತಿದಿನವೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ದೇವಿಯ ರಥ ಅಲಂಕಾರ, ಮುರಳಿ ಅಲಂಕಾರ, ಶೇಷಶಾಯಿ ಅಲಂಕಾರ, ಭವಾನಿ ಖಡ್ಗ ಅಲಂಕಾರ ಹಾಗೂ ಮಹಿಷಾಸುರಮರ್ಧಿನಿ ಅಲಂಕಾರದೊಂದಿಗೆ ಮಹಾಪೂಜೆಗಳು ನೆರವೇರಲಿವೆ. ಮಹಾನವಮಿಯಂದು ವೈದಿಕ ಹೋಮ, ವಿಜಯದಶಮಿ ಯಂದು ಶಮಿಪೂಜೆ ಹಾಗೂ ಸಾಮೂಹಿಕ ಸೀಮೋಲ್ಲಂಘನ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಕೊಜಾಗಿರಿ ಪೌರ್ಣಿಮೆಯಂದೂ ವಿಶೇಷ ಪೂಜೆ ನಡೆಯಲಿದೆ. ಛತ್ರಪತಿ ಶಿವಾಜಿ ಮಹಾರಾಜರಿಗೆ ದೇವಿ ಭವಾನಿ ಖಡ್ಗವನ್ನು ನೀಡಿದ್ದಾಳೆ ಎಂಬ ಐತಿಹಾಸಿಕ ನಂಬಿಕೆ ಈ ಕ್ಷೇತ್ರದ ಮಹಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ದೇವಿಯ ದರ್ಶನಕ್ಕಾಗಿ ತುಳಜಾಪುರಕ್ಕೆ ಆಗಮಿಸುತ್ತಿದ್ದಾರೆ.
ಒಂದೆಡೆ ಅಂಬಾಭವಾನಿಯ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿರುವ ಭಕ್ತರು… ಮತ್ತೊಂದೆಡೆ ಜನದಟ್ಟಣೆಯನ್ನು ನಿಯಂತ್ರಿ ಸಲು ಹರಸಾಹಸ ಪಡುತ್ತಿರುವ ಪೊಲೀಸ್ ಸಿಬ್ಬಂದಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಪ್ರತಿದಿನ ಸುಮಾರು ಒಂದೂವರೆ ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ದರ್ಶನದ ವ್ಯವಸ್ಥೆಯನ್ನು ಹೆಚ್ಚಿಸಲಾಗಿದ್ದು, ಭಕ್ತರ ಸುರಕ್ಷತೆಗಾಗಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸ ಲಾಗಿದೆ. ವಾಹನ ಸಂಚಾರದ ನಿರ್ಬಂಧ, ಪಾರ್ಕಿಂಗ್ ವ್ಯವಸ್ಥೆ, ಸರತಿ ಸಾಲುಗಳ ನಿರ್ವಹಣೆ ಹಾಗೂ ಜನಸಂದಣಿ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಲಕ್ಷಾಂತರ ಭಕ್ತರಿಗೆ ಸುಗಮ ದರ್ಶನ ಕಲ್ಪಿಸುವುದು, ಸಂಚಾರ ದಟ್ಟಣೆ ತಡೆಗಟ್ಟುವುದು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಹೀಗಾಗಿ ಪೊಲೀಸ್ ಇಲಾಖೆ, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಇನ್ನು ಅಕ್ಟೋಬರ್ 24ರಿಂದ ತುಳಜಾಭವಾನಿ ಪಾದಯಾತ್ರೆ ಆರಂಭವಾಗಲಿದೆ. ಈ ಪವಿತ್ರ ಯಾತ್ರೆಯಲ್ಲಿ ನಮ್ಮ ಇನ್ ನ್ಯೂಜ್ ನ ವಿಜಯಪುರ ವರದಿಗಾರ ವಿಜಯ ಕುಮಾರ ಸಾರವಾಡ ಅವರ ನೇತೃತ್ವದ ತಂಡವೂ ಪಾಲ್ಗೊಳ್ಳಲಿದೆ. ಕಳೆದ ಹತ್ತು ವರ್ಷಗಳಿಂದ ತುಳಜಾಭವಾನಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರತಿಯೊಂದು ಪ್ರಮುಖ ಆಗುಹೋಗುಗಳನ್ನು ವರದಿ ಮಾಡುತ್ತಿರುವ ವಿಜಯಕುಮಾರ ಸಾರವಾಡ ನೇತೃತ್ವದ ಇನ್ ನ್ಯೂಜ್ ತಂಡ, ಈ ಬಾರಿಯೂ ಕ್ಷೇತ್ರದ ವಿಶೇಷತೆಗಳನ್ನು ನಿಮ್ಮ ಮುಂದಿಡಲು ಸಜ್ಜಾಗಿದೆ. ದೇವಿಯ ವಿಶೇಷ ಅಲಂಕಾರ ಗಳು, ಧಾರ್ಮಿಕ ವಿಧಿ ವಿಧಾನಗಳು, ಭಕ್ತರ ಭಾವನೆಗಳು ಹಾಗೂ ಪಾದಯಾತ್ರೆಯ ಅನುಭವ ಗಳನ್ನು ಪಿನ್ ಟು ಪಿನ್… ಬ್ಯಾಕ್ ಟು ಬ್ಯಾಕ್ ವರದಿಗಳ ಮೂಲಕ ನಿಮ್ಮ ಮನೆಮನಗಳಿಗೆ ತಲುಪಿಸಲಿದೆ.
ಒಟ್ಟಾರೆ, ಭಕ್ತಿ ನಮ್ಮ ಸಂಕಲ್ಪ… ವರದಿ ನಮ್ಮ ಕರ್ತವ್ಯ… ನಿಮ್ಮ ಪ್ರೋತ್ಸಾಹವೇ ನಮ್ಮ ಶಕ್ತಿ! ಕಳೆದ ಹತ್ತು ವರ್ಷಗಳಿಂದ ನೀಡುತ್ತಿರುವ ನಿಮ್ಮ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹ ಈ ಬಾರಿಯೂ ಹೀಗೆಯೇ ಇರಲಿ. ಶ್ರೀ ತುಳಜಾಭವಾನಿ ದೇವಿಯ ಕೃಪಾಶೀರ್ವಾದ ಸರ್ವರ ಮೇಲಿರಲಿ.
ತುಳಜಾಪುರದಿಂದ ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
