ರಾಜ್ಯದಲ್ಲಿ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಹೆಚ್ಚಿನ ಬರ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಗೋವು ಪೂಜೆ ಸಲ್ಲಿಸುವ ಮೂಲಕ ಯತ್ನಾಳ ಅವರು ಪ್ರತಿಭಟನೆಗೆ ಚಾಲನೆ ನೀಡಿದರು. ಈ ವೇಳೆ ಜೆಸಿಬಿ ಚಿಹ್ನೆಯ ಧ್ವಜಗಳು ಹಾರಾಡಿದವು.

ಅಲ್ಲದೆ, ಜೆಸಿಬಿ ಮೂಲಕ ಯತ್ನಾಳ ಅವರ ಮೇಲೆ ಹೂವಿನ ಪುಷ್ಪವೃಷ್ಟಿ ಮಾಡಲಾಯಿತು. ಬಳಿಕ ಪ್ರತಿಭಟನಾ ಮೆರವಣಿಗೆಯು ಗಾಂಧಿ ಚೌಕ್ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯತ್ತ ಸಾಗಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸುವ ಉದ್ದೇಶ ಹೊಂದಿದೆ. ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ಎಸ್ಐಆರ್ನಲ್ಲಿನ ಲೋಪದೋಷಗಳು ಹಾಗೂ ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಮಾಡುತ್ತಿದೆ ಎನ್ನಲಾದ ಆಧಾರರಹಿತ ಆರೋಪಗಳನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯ ಬಳಿಕ ಬಹಿರಂಗ ಸಭೆ ನಡೆಯುತ್ತಿದ್ದು, ರೈತರು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದಾರೆ. ಬರ ಪರಿಹಾರ, ರೈತರ ಸಮಸ್ಯೆಗಳು ಹಾಗೂ ಎಸ್ಐಆರ್ ಪರಿಷ್ಕರಣೆಯ ವಿಚಾರಗಳನ್ನು ಮುಂದಿಟ್ಟುಕೊಂಡು ನಡೆದ ಈ ಪ್ರತಿಭಟನೆಯಲ್ಲಿ ಶಾಸಕ ಯತ್ನಾಳ ಅವರಿಗೆ ಬೆಂಬಲ ಸೂಚಿಸುವ ಜೆಸಿಬಿ ಚಿಹ್ನೆಯ ಧ್ವಜಗಳು ಗಮನ ಸೆಳೆದವು. ಗೋವು ಪೂಜೆ, ಜೆಸಿಬಿ ಮೂಲಕ ಪುಷ್ಪವೃಷ್ಟಿ ಹಾಗೂ ಬಹಿರಂಗ ಸಭೆಯ ಮೂಲಕ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ನಡೆಸಿದರು.
