Vijaypura

ನವೆಂಬರ್‌ಗೆ ವಿಜಯೇಂದ್ರನನ್ನು ಕಿತ್ತೆಸೆಯುತ್ತಾರೆ’ – ಯತ್ನಾಳ್ ವಾಗ್ದಾಳಿ!

Share

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಮ್ಮ ಕಾರ್ಪೋರೇಟರ್‌ಗಳನ್ನು ನಾಲಾಯಕ್ ಎನ್ನುವ ನೀನು ನಾಲಾಯಕರ ಗುರು” ಎಂದು ಪರೋಕ್ಷವಾಗಿ ಟೀಕಿಸಿದ ಯತ್ನಾಳ್, ನವೆಂಬರ್ ವೇಳೆಗೆ ವಿಜಯೇಂದ್ರ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ವಿಜಯಪುರ ನಗರದ ಗಗನ ಮಹಲ್ ಮುಂಭಾಗದಲ್ಲಿ ಸೋಮವಾರ ರೈತರಿಗೆ ಹೆಚ್ಚಿನ ಬರಪರಿಹಾರ ನೀಡುವುದು, ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಲೋಪದೋಷ ಗಳ ವಿರುದ್ಧ ಕ್ರಮ ಕೈಗೊಳ್ಳುವುದು ಹಾಗೂ ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಟೀಕೆಗಳನ್ನು ಖಂಡಿಸಿ ನಡೆದ ಪ್ರತಿಭಟನಾ ಮೆರವಣಿಗೆಯ ಬಳಿಕ ಅವರು ಮಾಧ್ಯಮ ಗಳೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ವಿರೋಧ ಪಕ್ಷ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ ಯತ್ನಾಳ್, ಆಡಳಿತ ಪಕ್ಷದ ವಿರುದ್ಧ ಹೋರಾಟ ನಡೆಸಲು ವಿರೋಧ ಪಕ್ಷದ ನಾಯಕರು ಹಿಂಜರಿಯುತ್ತಿದ್ದಾರೆ ಎಂದು ಟೀಕಿಸಿದರು. ಜನರ ಸಮಸ್ಯೆಗಳಿಗಾಗಿ ತಾವು ಹೋರಾಟ ಮುಂದುವರಿಸು ವುದಾಗಿ ಹೇಳಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ‘ಜೆಸಿಬಿ ಸರ್ಕಾರ’ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೂ ಅಭ್ಯರ್ಥಿಗಳು ಸಿದ್ಧವಾಗಿದ್ದಾರೆ. ಹಂತ ಹಂತವಾಗಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು ಎಂದು ತಿಳಿಸಿದರು. ರಾಜ್ಯ ದಲ್ಲಿ ಅಧಿಕಾರ ಹಂಚಿಕೆ ಮಾಡಿಕೊಂಡು ಪರಸ್ಪರರ ತಪ್ಪುಗಳನ್ನು ಮುಚ್ಚಿಹಾಕುವ ರಾಜಕೀಯ ಸಂಸ್ಕೃತಿ ಕೊನೆಗೊಳ್ಳಬೇಕು. ಕಳ್ಳರು ಆಡಳಿತ ನಡೆಸುವ ವ್ಯವಸ್ಥೆ ಬದಲಾಗಬೇಕು. ಜನರ ಮುಂದೆ ಹೊಸ ರಾಜಕೀಯ ವ್ಯವಸ್ಥೆಯನ್ನು ತರುವ ಅಗತ್ಯವಿದೆ ಎಂದು ಯತ್ನಾಳ್ ಪ್ರತಿಪಾದಿಸಿದರು.

ಬಿಜೆಪಿಗೆ ಮರಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಾರಿ ಯಾವುದೇ ಷರತ್ತುಗಳಿಲ್ಲದೆ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಉತ್ತರ ಕರ್ನಾಟಕದಲ್ಲಿ ತಾವು ಸೂಚಿಸಿದವರಿಗೆ ಟಿಕೆಟ್ ನೀಡುವ ಭರವಸೆ ಇರಬೇಕು. ಈ ಕುರಿತು ಕರಾರು ಮಾಡಿಕೊಂಡೇ ಪಕ್ಷಕ್ಕೆ ಮರಳುತ್ತೇನೆ ಎಂದು ಹೇಳಿದರು. ಪ್ರತಿಭಟನೆ ಯಲ್ಲಿ ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಸೇರಿದಂತೆ ದಯಾಸಾಗರ ಪಾಟೀಲ, ಪ್ರಭುಗೌಡ ದೇಸಾಯಿ, ಅಪ್ಪುಗೌಡ ಪಾಟೀಲ ಮನಗೂಳಿ, ಚಂದ್ರು ಚೌಧರಿ, ಎಂ.ಎಸ್. ರುದ್ರಗೌಡರ, ಶಂಕರ ಹೂಗಾರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!