Nippani

ಅಕ್ರಮ ಗಾಂಜಾ ಮಾರಾಟ: ನಿಪ್ಪಾಣಿ ಗ್ರಾಮೀಣ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

Share

ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೊಗನೊಳ್ಳಿ ನಿವಾಸಿ ಪ್ರತೀಕ್ ತಾನಾಜಿ ಶಿಂದೆ (20) ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಶಿವಾಜಿ ನಗರ ನಿವಾಸಿ ಸಾರ್ಥಕ್ ಧನಾಜಿ ಗಾಣೇಶಕರ್ (20) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 3, 2026 ರಂದು ಸಂಜೆ 18:15 ಗಂಟೆಯ ಸುಮಾರಿಗೆ, ಕೊಗನೊಳ್ಳಿ ಗ್ರಾಮದ ಗಡಿಯಿಂದ ಮತ್ತಿವಾಡಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಸಿಪಿಸಿ-2693 ಡಿ. ಎ. ತಳವಾರ ಅವರಿಂದ ಬಂದ ಈ ಮಾಹಿತಿಯನ್ನು ಖಚಿತಪಡಿಸಿಕೊಂಡ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಶಿವರಾಜ್ ಭೀ. ನಾಯಕವಾಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದರು.

ದಾಳಿಯ ವೇಳೆ ಆರೋಪಿಗಳಿಂದ ಸುಮಾರು ₹10,000 ಮೌಲ್ಯದ 218 ಗ್ರಾಂ ಗಾಂಜಾ, ₹500 ನಗದು ಹಣ ಹಾಗೂ ಗಾಂಜಾ ಸಾಗಾಣಿಕೆಗೆ ಬಳಸಿದ್ದ ಒಂದು ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ (ಅಪರಾಧ ಸಂಖ್ಯೆ: 109/2026, ಕಲಂ: 20 (b) (ii) (A)) ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Tags:

error: Content is protected !!