ನಿಪ್ಪಾಣಿ:‘ಹರ್ ಘರ್ ತಿರಂಗಾ’ ಅಭಿಯಾನದ ಭಾಗವಾಗಿ ನಿಪ್ಪಾಣಿ ನಗರದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಭವ್ಯ ತಿರಂಗಾ ರ್ಯಾಲಿಯು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಜೋರು ಮಳೆಯ ನಡುವೆಯೂ ಶಾಸಕಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಸಾವಿರಾರು ನಾಗರಿಕರು ರಾಷ್ಟ್ರಧ್ವಜ ಹಿಡಿದು ಪಾಲ್ಗೊಳ್ಳುವ ಮೂಲಕ ಅಭೂತಪೂರ್ವ ದೇಶಭಕ್ತಿ ಮೆರೆದರು.


ನಗರದ ಪ್ರಮುಖ ಕಿತ್ತೂರು ಚನ್ನಮ್ಮ ವೃತ್ತದಿಂದ ಚಾಲನೆ ಪಡೆದ ರ್ಯಾಲಿಯು ಅಶೋಕ ನಗರ, ಕೊಠಿವಾಲೆ ಕಾರ್ನರ್, ನೆಹರು ಚೌಕ, ಚಾಟೆ ಮಾರ್ಕೆಟ್, ಹಳೇ ಬಸ್ ನಿಲ್ದಾಣ, ನಗರಸಭೆ, ಸಾಖರವಾಡಿ, ಧರ್ಮವೀರ ಸಂಭಾಜಿ ಸರ್ಕಲ್ ಹಾಗೂ ನಿಪ್ಪಾಣಿ ಮೆಡಿಕಲ್ ಮುಂತಾದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಚನ್ನಮ್ಮ ವೃತ್ತದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯುದ್ದಕ್ಕೂ ‘ಭಾರತ ಮಾತಾ ಕೀ ಜೈ’ ಹಾಗೂ ‘ವಂದೇ ಮಾತರಂ’ ಘೋಷಣೆಗಳು ಮುಗಿಲು ಮುಟ್ಟಿದವು.

ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾಸಕಿ ಶಶಿಕಲಾ ಜೊಲ್ಲೆ, “ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಮಾಡಿದ ಮಹಾನ್ ತ್ಯಾಗ ಮತ್ತು ಬಲಿದಾನಗಳನ್ನು ಯುವ ಪೀಳಿಗೆಗೆ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಬಲವಾಗಿ ಹೊರಹೊಮ್ಮುತ್ತಿದ್ದು, ಪ್ರತಿಯೊಬ್ಬ ನಾಗರಿಕನೂ ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಬೇಕು,” ಎಂದು ಹೇಳಿದರು.
ಮುಂದುವರಿದು, “ಆಗಸ್ಟ್ 13ರಿಂದ 15ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ ತಾಲ್ಲೂಕಿನ ಪ್ರತಿಯೊಬ್ಬ ನಾಗರಿಕರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಬೇಕು. ದೇವರು, ದೇಶ ಮತ್ತು ಧರ್ಮಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯೋಣ,” ಎಂದು ಕರೆ ನೀಡಿದರು.
ಈ ಭವ್ಯ ಮೆರವಣಿಗೆಯಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಾಳಾಸಾಹೇಬ ಕದಂ, ನಗರ ಅಧ್ಯಕ್ಷ ರಾಜು ಗುಂದೇಶಾ, ಮಹಿಳಾ ಮೋರ್ಚಾ ಅಧ್ಯಕ್ಷೆ ಯೋಗಿತಾ ಘೋರಪಡೆ, ಲಕ್ಷ್ಮೀ ಖೋತ, ಹಾಲಶುಗರ್ ಉಪಾಧ್ಯಕ್ಷೆ ಗೀತಾ ಪಾಟೀಲ, ಜಯವಂತ ಭಾಟಲೆ, ಸುನೀಲ ಪಾಟೀಲ, ಮಹಾಲಿಂಗೇಶ ಕೊಠಿವಾಲೆ, ಪ್ರಕಾಶ ಶಿಂಧೆ, ಸಂತೋಷ ಸಾಂಗಾವಕರ, ದೀಪಕ ಮಾನೆ, ಬಂಡಾ ಘೋರಪಡೆ, ಸಾಗರ ಮಿರಜೆ, ರವೀಂದ್ರ ಇಂಗವಲೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮಹಿಳೆಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.
