ಬೆಳಗಾವಿ ಮಹಾನಗರ ಪಾಲಿಕೆಯ 24ನೇ ಅವಧಿಯ ನಾಲ್ಕು ಪ್ರಮುಖ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ಪೂರ್ಣಗೊಂಡಿದೆ. ಯಾವುದೇ ಗೊಂದಲಗಳಿಲ್ಲದೆ ಎಲ್ಲಾ ನಾಲ್ಕೂ ಸಮಿತಿಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಶೀಘ್ರದಲ್ಲೇ ಅಧ್ಯಕ್ಷರ ಆಯ್ಕೆ ನಡೆಯಲಿದೆ.


ಇಂದು ನಡೆದ ಚುನಾವಣೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೆರಿಗೆ ನಿರ್ಧಾರಣೆ ಮತ್ತು ಹಣಕಾಸು ಸಮಿತಿಗೆ ಮಿರಾಜಕರ ಬ್ರಹ್ಮಾನಂದ, ರಮೇಶ ಮೈಲುಗೋಳ, ಪಾಟೀಲ ಶಂಕರ, ರವಿರಾಜ ಸಾಂಬ್ರೇಕರ, ಚೋಪಡೆ ದೀಪಾಲಿ, ಮೋದಿನ್ಸಾಬ ಮಸವಾಲೆ ಹಾಗೂ ಬಸವರಾಜ ಮೋದಗೇಕರ ಆಯ್ಕೆಯಾಗಿದ್ದಾರೆ. ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಸಮಿತಿಗೆ ಶ್ರೀಶೈಲ ಕುಂಬಾರ, ರಾಜು ಭಾತಕಾಂಡೆ, ಚಿಕ್ಕಲದಿನ್ನಿ ರೂಪಾ, ಭಾಗವತ ನೇತ್ರಾವತಿ, ಪ್ರಿಯಾ ಸಾತಗೌಡ, ಶ್ಯಾಮೋಬಿನ ಪಠಾಣ ಹಾಗೂ ಶಾಹಿದಖಾನ ಪಠಾಣ ನೇಮಕಗೊಂಡಿದ್ದಾರೆ. ನಗರ ಯೋಜನೆ ಸಮಿತಿಗೆ ಜಯಂತ ಜಾಧವ, ಶ್ರೇಯಸ ನಾಕಾಡಿ, ಸವಿತಾ ಪಾಟೀಲ, ಗಿರೀಶ ಧೋಂಗಡಿ, ಜವಳಕರ ಅಭಿಜೇತ, ಲಕ್ಷ್ಮೀ ಲೋಕರಿ ಹಾಗೂ ಖುರ್ಷಿದ ಮುಲ್ಲಾ ಆಯ್ಕೆಯಾದರೆ, ಲೆಕ್ಕಗಳ ಸಮಿತಿಗೆ ಸಾರಿಕಾ ಪಾಟೀಲ, ರೇಷ್ಮಾ ಕಾಮಕರ, ಮಾಧವಿ ರಾಠೋಡ, ಜಯತೀರ್ಥ ಸವದತ್ತಿ, ನಿತೀನ ಜಾಧವ, ಶಿವಾಜಿ ಮಂಡೋಳಕರ ಮತ್ತು ಅಫ್ರೋಜ ಮುಲ್ಲಾ ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಮೇಯರ್ ಪ್ರೀತಿ ಕಾಮಕರ್ ಅವರು, ಬೆಳಿಗ್ಗೆ 10 ರಿಂದ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು ಹಾಗೂ ಮಧ್ಯಾಹ್ನ 3 ಗಂಟೆಯಿಂದ ಪರಿಶೀಲನೆ ಮತ್ತು ಆಯ್ಕೆ ಪ್ರಕ್ರಿಯೆ ಪ್ರಾರಂಭವಾಯಿತು ಎಂದು ತಿಳಿಸಿದರು. ಪ್ರಾದೇಶಿಕ ಆಯುಕ್ತರ (RC) ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ತೆರಿಗೆ, ಆರೋಗ್ಯ, ಲೆಕ್ಕ ಹಾಗೂ ಪಿಡಬ್ಲ್ಯೂಡಿ ಸೇರಿದಂತೆ ನಾಲ್ಕೂ ಸ್ಥಾಯಿ ಸಮಿತಿಗಳ ಆಯ್ಕೆಯು ಯಾವುದೇ ಗೊಂದಲಗಳಿಲ್ಲದೆ ಅತ್ಯಂತ ಶಾಂತಿಯುತವಾಗಿ ಮತ್ತು ಸುಸೂತ್ರವಾಗಿ ಮುಕ್ತಾಯಗೊಂಡಿದೆ ಎಂದು ಮೇಯರ್ ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತನಾಡಿದ ಉಪಮೇಯರ್ ಹಣಮಂತ ಕೊಂಗಾಲಿ ಅವರು, ಪ್ರತಿ ಸಮಿತಿಯ 7 ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು ಹಾಗೂ ಪಕ್ಷದ ಹಿರಿಯ ನಾಯಕರಾದ ಅಭಯ್ ಪಾಟೀಲ್, ಜಗದೀಶ್ ಬೆಟಗೇರಿ ಸೇರಿದಂತೆ ವರಿಷ್ಠರೊಂದಿಗೆ ಚರ್ಚಿಸಿ ಆಗಸ್ಟ್ 17ರಂದು ಅಧ್ಯಕ್ಷರ ಆಯ್ಕೆ ಅಂತಿಮಗೊಳಿಸಲಾಗುವುದು ಎಂದರು. ಜೊತೆಗೆ, ಪಾಲಿಕೆಗೆ 15ನೇ ಹಣಕಾಸು ಯೋಜನೆಯಡಿ 18 ಕೋಟಿ ರೂ. ಹಾಗೂ ಉತ್ತಮ ಕಾಮಗಾರಿಗೆ 16ನೇ ಹಣಕಾಸು ಯೋಜನೆಯಡಿ 34 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅಷ್ಟೇ ಅಲ್ಲದೆ ಕರ್ನಾಟಕದ 7 ಮಹಾನಗರ ಪಾಲಿಕೆಗಳಲ್ಲಿ ಬೆಳಗಾವಿ ‘ಸಿಟೀಸ್ 2.0’ (CITIIS 2.0) ಯೋಜನೆಗೆ ಆಯ್ಕೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
