Belagavi

ಕಲ್ಲೇಹೊಳ ರೈತರ ಭೂಮಿ ಉಳಿಸಲು ಬೃಹತ್ ಪ್ರತಿಭಟನೆ: ಜಿಲ್ಲಾಧಿಕಾರಿಗೆ ಮನವಿ

Share

ಬೆಳಗಾವಿ ತಾಲ್ಲೂಕಿನ ಕಲ್ಲೇಹೊಳ ಗ್ರಾಮದಲ್ಲಿ ಶತಮಾನಗಳಿಂದ ಉಳುಮೆ ಮಾಡುತ್ತಿದ್ದ ರೈತರ ಜಮೀನನ್ನು ಕಬಳಿಸಲು ಹೊರಟಿರುವ ಭೂಮಾಫಿಯಾ ಹಾಗೂ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಹಕ್ಕಿನ ಭೂಮಿ ರಕ್ಷಿಸಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ನ್ಯಾಯಕ್ಕಾಗಿ ಧರಣಿ ನಡೆಸಿದ್ದಾರೆ.

ಬೆಳಗಾವಿ ತಾಲ್ಲೂಕಿನ ಕಲ್ಲೇಹೊಳ ಗ್ರಾಮದ ಸುಮಾರು 100 ರಿಂದ 125 ರೈತ ಕುಟುಂಬಗಳು ತಮ್ಮ ಪೂರ್ವಜರ ಕಾಲದಿಂದಲೂ ಸಾಗುವಳಿ ಮಾಡುತ್ತ ಬಂದಿರುವ ಜಮೀನನ್ನು ಉಳಿಸಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಿವೆ. 1972ರ ಟ್ರಿಬ್ಯೂನಲ್ ಕಾಯ್ದೆಯಡಿ (‘ಉಳುವವನೇ ಭೂಮಿ ಒಡೆಯ’) ಫಾರಂ ನಂ. 7 ಮತ್ತು ಫಾರಂ ನಂ. 10 ಸೇರಿದಂತೆ ಎಲ್ಲಾ ಅಧಿಕೃತ ದಾಖಲೆಗಳು ರೈತರ ಬಳಿಯಿದ್ದರೂ, ಕೆಲ ಭೂಮಾಫಿಯಾದವರು ಮತ್ತು ಅಧಿಕಾರಿಗಳು ಒಟ್ಟಾಗಿ ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.

ಉಪವಿಭಾಗಾಧಿಕಾರಿಗಳು ನೀಡಿರುವ ಕಾನೂನುಬಾಹಿರ ಆದೇಶವನ್ನು ರದ್ದುಪಡಿಸಬೇಕು ಹಾಗೂ ರೈತರಿಗೆ ನ್ಯಾಯ ಒದಗಿಸಬೇಕು ಎಂದು ರಾಷ್ಟ್ರ ರಯತ ಸಂಘದ ಮೂಲಕ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ದಯಾಮರಣದ ಆದೇಶ ನೀಡುವಂತೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಇಎಸ್ ಮುಖಂಡ ಆರ್. ಎಂ. ಚೌಗುಲೆ ಸೇರಿದಂತೆ ಅನೇಕರು ಮಾತನಾಡಿ, ರೈತರಿಗೆ ಅನ್ಯಾಯ ಮುಂದುವರಿದರೆ ಹೋರಾಟವನ್ನು ಉಗ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!