ಒಂದು ಜಗತ್ತು – ಒಂದು ಕುಟುಂಬ ಪರಿಕಲ್ಪನೆಯ ಶಿಲ್ಪಿ ಸದ್ಗುರು ಶ್ರೀ ಶ್ರೀ ಮಧುಸೂದನ್ ಸಾಯಿ ಸ್ವಾಮೀಜಿ ಅವರಿಂದ ಎಸ್ಬಿಜಿ ಶಿಕ್ಷಣ ಸಮೂಹದ ಆವರಣದಲ್ಲಿ ವಿಶೇಷ ಬೌದ್ಧಿಕ ಸಂವಾದ ಕಾರ್ಯಕ್ರಮ ನೆರವೇರಿತು. ‘ನಿಸ್ವಾರ್ಥ ಸೇವೆಯೇ ಜೀವನದ ನಿಜವಾದ ಯಶಸ್ಸು’ ಎಂದು ಕರೆ ನೀಡಿದ ಸದ್ಗುರುಗಳು, ವಿದ್ಯಾರ್ಥಿಗಳು ಹಾಗೂ ಆಹ್ವಾನಿತರಿಗೆ ಸ್ಪೂರ್ತಿದಾಯಕ ಮಾರ್ಗದರ್ಶನ ನೀಡಿದರು.


ಬೆಳಗಾವಿಯ ಲವ್ ಡೇಲ್ ಸೆಂಟ್ರಲ್ ಶಾಲೆಯ ಆವರಣದಲ್ಲಿ ಎಸ್ಬಿಜಿ ಶಿಕ್ಷಣ ಸಮೂಹದ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಶ್ರೀ ಮಧುಸೂದನ್ ಸಾಯಿ ಸ್ವಾಮೀಜಿ ಭಾಗವಹಿಸಿ ಯಶಸ್ಸಿನ ಮಂತ್ರ ಬೋಧಿಸಿದರು. ಶುದ್ಧತೆ, ತಾಳ್ಮೆ ಮತ್ತು ಸ್ಥಿರತೆ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಮೂರು ಪ್ರಮುಖ ಸೂತ್ರಗಳಾಗಿವೆ ಎಂದು ತಿಳಿಸಿದ ಅವರು, ಸ್ವತಃ ಯಶಸ್ಸು ಸಾಧಿಸುವುದು ಮಾತ್ರವೇ ನಿಜವಾದ ಯಶಸ್ಸಲ್ಲ, ಬದಲಿಗೆ ಸಮಾಜದ ನಿರ್ಗತಿಕ ವರ್ಗಕ್ಕೆ ನಿಸ್ವಾರ್ಥ ಸೇವೆ ನೀಡಿದಾಗ ಮಾತ್ರ ಜೀವನ ಅರ್ಥಪೂರ್ಣವಾಗುತ್ತದೆ ಎಂದು ಪ್ರತಿಪಾದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ದೀಪ ಪ್ರಜ್ವಲನೆ ಹಾಗೂ ಸುಂದರ ಗುರುವಂದನೆ ನೆರವೇರಿತು. ಸಂಸ್ಥೆಯ ಅಧ್ಯಕ್ಷರಾದ ರಾಜ್ ಘಾಟ್ಗೆ ಅತಿಥಿಗಳನ್ನು ಸ್ವಾಗತಿಸಿ, ಸ್ವಹಿತವನ್ನು ಮೀರಿದ ಸಮಾಜ ಸೇವೆಯೇ ನಿಜವಾದ ಯಶಸ್ಸಿಗೆ ಹಾದಿ ಎಂದು ನುಡಿದರು.

ಈ ವಿಶೇಷ ಸಂದರ್ಭದಲ್ಲಿ ಎಸ್ಬಿಜಿ ಶಿಕ್ಷಣ ಸಮೂಹದ ಸಂಸ್ಥಾಪಕ ಅಧ್ಯಕ್ಷ ಎಸ್.ಬಿ. ಘಾಟ್ಗೆ, ರಾಜ್ ಘಾಟ್ಗೆ, ಅಮಿತ್ ಘಾಟ್ಗೆ ಹಾಗೂ ಸಾಗರ್ ಘಾಟ್ಗೆ ಅವರು ಶ್ರೀ ಮಧುಸೂದನ ಸ್ವಾಮೀಜಿ ಅವರಿಗೆ ಹೃದಯಸ್ಪರ್ಶಿ ಗೌರವ ಸಮರ್ಪಿಸಿದರು. ನಂತರ ನಡೆದ ಸಂವಾದ ಗೋಷ್ಠಿಯಲ್ಲಿ ಸದ್ಗುರುಗಳು ಸಭಿಕರು ಹಾಗೂ ವಿದ್ಯಾರ್ಥಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಸರಳ ಹಾಗೂ ಅರ್ಥಪೂರ್ಣ ಉತ್ತರಗಳನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅನುಯಾಯಿಗಳು, ಪ್ರಮುಖ ಉದ್ಯಮಿಗಳು, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ನೂರಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ದೀಪಾಲಿ ಕುಲಕರ್ಣಿ ಮತ್ತು ಅಕ್ಷತಾ ಗಡೇಕರ್ ಕಾರ್ಯಕ್ರಮ ನಿರೂಪಿಸಿದರೆ, ಪ್ರಾಂಶುಪಾಲರಾದ ಲಕ್ಷ್ಮೀ ಇಂಚಲ ವಂದನಾರ್ಪಣೆ ಸಲ್ಲಿಸಿದರು.
