Bailahongala

ಸೇತುವೆ ಕಾಮಗಾರಿ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ: ಹೊಸೂರ ಗ್ರಾಮದಲ್ಲಿ ಶವವಿಟ್ಟು ಪ್ರತಿಭಟನೆ

Share

ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯೊಬ್ಬರು ಸೇತುವೆ ಕಾಮಗಾರಿಗೆ ತೋಡಲಾಗಿದ್ದ ತೆಗ್ಗಿನ ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆಕ್ರೋಶಗೊಂಡ ಗ್ರಾಮಸ್ಥರು, ಶವದೊಂದಿಗೆ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು. ಈ ಕುರಿತ ವಿವರವಾದ ವರದಿ ಇಲ್ಲಿದೆ.

ಹೊಸೂರ ಗ್ರಾಮದ ಮಲ್ಲವ್ವ ಸುರೇಶ ವಿವೇಕಿ (44) ಎಂಬುವವರೇ ಮೃತಪಟ್ಟ ದುರ್ದೈವಿಯಾಗಿದ್ದು, ಬುಧವಾರ ಬೆಳಗಿನ ಜಾವ ಬೈಲಹೊಂಗಲ-ಮುನವಳ್ಳಿ ಮುಖ್ಯ ರಸ್ತೆಯಲ್ಲಿ ವಾಯುವಿಹಾರ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸೇತುವೆ ಕಾಮಗಾರಿಗಾಗಿ ತೋಡಲಾಗಿದ್ದ ಆಳವಾದ ತೆಗ್ಗಿನಲ್ಲಿ ಹಳ್ಳ ಹಾಗೂ ಮಳೆ ನೀರು ಸಂಗ್ರಹಗೊಂಡಿತ್ತು. ಯಾವುದೇ ಬ್ಯಾರಿಕೇಡ್ ಅಥವಾ ಮುನ್ನೆಚ್ಚರಿಕಾ ಫಲಕಗಳಿಲ್ಲದ ಕಾರಣ, ಮಲ್ಲವ್ವ ಅವರು ಆಯತಪ್ಪಿ ತೆಗ್ಗಿಗೆ ಬಿದ್ದು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಳ್ಳದ ಗುತ್ತಿಗೆದಾರನ ಬೇಜವಾಬ್ದಾರಿತನದಿಂದಲೇ ಈ ಜೀವ ಹಾನಿಯಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯ ನಂತರ ರೊಚ್ಚಿಗೆದ್ದ ಸೋಮಲಿಂಗಪ್ಪ ಮೆಳ್ಳಿಕೇರಿ ಸೇರಿದಂತೆ ನೂರಾರು ಗ್ರಾಮಸ್ಥರು ಶವದ ವಾಹನದೊಂದಿಗೆ ಸ್ಥಳದಲ್ಲಿ ಜಮಾಯಿಸಿ, ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರ ಒದಗಿಸಬೇಕು, ಸುರಕ್ಷತಾ ಕ್ರಮ ಕೈಗೊಳ್ಳಬೇಕು ಹಾಗೂ ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕೆ ಧಾವಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅವ್ಯವಸ್ಥೆಯನ್ನು ಪರಿಶೀಲಿಸಿ, ಗುರುವಾರ ಗುತ್ತಿಗೆದಾರರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಬಳಿಕ ಅಂತ್ಯಸಂಸ್ಕಾರ ನೆರವೇರಿತು. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Tags:

error: Content is protected !!