ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಾಲಿಕ್ಕೊಪ್ಪ ಗ್ರಾಮದ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ಕುರಿಗಳ ಮೇಲೆ ವೇಗವಾಗಿ ಬಂದ ಕಾರೊಂದು ಹರಿದ ಪರಿಣಾಮ 48 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಘಟನೆ ಬಳಿಕ ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.


ಬೈಲಹೊಂಗಲದಿಂದ ಬೆಳವಡಿ ಕಡೆಗೆ ಅತೀ ವೇಗವಾಗಿ ತೆರಳುತ್ತಿದ್ದ ಕಾರು, ಜಾಲಿಕ್ಕೊಪ್ಪ ಗ್ರಾಮದ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ಕುರಿಗಳ ಹಿಂಡಿನ ಮೇಲೆ ಏಕಾಏಕಿ ಹರಿದಿದೆ. ಕೆಂಗಾನೂರ ಗ್ರಾಮದ ಚಂದ್ರಪ್ಪ ಹಿತ್ತಲಮನಿ ಹಾಗೂ ದೊಡವಾಡ ಗ್ರಾಮದ ಬೀರಪ್ಪ ಅವರಿಗೆ ಸೇರಿದ ಕುರಿಗಳು ಈ ಅಪಘಾತಕ್ಕೆ ಬಲಿಯಾಗಿದ್ದು, ಸ್ಥಳದಲ್ಲೇ 48 ಕುರಿಗಳು ಮೃತಪಟ್ಟಿದ್ದರೆ, 15ಕ್ಕೂ ಹೆಚ್ಚು ಕುರಿಗಳು ನರಳಾಡುತ್ತಿವೆ. ಕಾರಿನ ಚಕ್ರಕ್ಕೆ ಸಿಲುಕಿ ಕೆಲವು ಗರ್ಭಿಣಿ ಕುರಿಗಳ ಹೊಟ್ಟೆ ಸೀಳಿ ಮರಿಗಳು ಹೊರಬಿದ್ದ ದೃಶ್ಯ ಅತ್ಯಂತ ಕರುಣಾಜನಕವಾಗಿದ್ದು, ಇದನ್ನು ಕಂಡ ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.
ಅಪಘಾತ ಎಸಗಿದ ಬಳಿಕ ಕಾರು ಚಾಲಕ ಸ್ಥಳದಲ್ಲೇ ಕಾರನ್ನು ಬಿಟ್ಟು ಎಸ್ಕೇಪ್ ಆಗಿದ್ದಾನೆ. ಕುರಿಗಳ ದಾರುಣ ಸಾವು ಮತ್ತು ನರಳಾಟ ಕಂಡು ಸಾರ್ವಜನಿಕರು ಹಾಗೂ ಕುರಿಗಳ ಮಾಲೀಕರು ಕಾರು ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಬೈಲಹೊಂಗಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಾರಿಯಾದ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
