ಬೆಳಗಾವಿ ಸಾಂಬ್ರಾ ಗ್ರಾಮದ ಖಾಸಗಿ ಸಂಘದಲ್ಲಿ ಸುಮಾರು 1.96 ಕೋಟಿ ಹಣ ದುರ್ಬಳಕೆ ಮತ್ತು ವಂಚನೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘದ ಮಾಜಿ ಕಾರ್ಯದರ್ಶಿ ಭುಜಂಗ ಕೇದಾರಿ ಜೋಯಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹೇಳಿದರು.

ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಭುಜಂಗ ಕೇದಾರಿ ಜೋಯಿ ಅವರು 2003ರಿಂದ 2023ರವರೆಗೆ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಆಡಳಿತ ಹಾಗೂ ಹಣಕಾಸಿನ ವ್ಯವಹಾರಗಳ ಸಂಪೂರ್ಣ ಜವಾಬ್ದಾರಿ ಹೊಂದಿದ್ದರು. ಈ ಅವಧಿಯಲ್ಲಿ ಸಂಘದ 19 ಸದಸ್ಯರ ಸಾಲದ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, ಸಂಘದ ಅಧ್ಯಕ್ಷರ ಸಹಿಯನ್ನು ನಕಲು ಮಾಡಿ, ಸದಸ್ಯರಿಗೆ ತಿಳಿಯದಂತೆ ಖಾಸಗಿ ವ್ಯಕ್ತಿಯೊಬ್ಬರ ಬಳಿ ಅಡಮಾನ ಇಟ್ಟು ಸುಮಾರು 59.12 ಲಕ್ಷ ಸಾಲ ಪಡೆದು, ಅದನ್ನು ಸಂಘದ ಖಾತೆಗೆ ಜಮಾ ಮಾಡದೇ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದರು.
ಇದೇ ಪ್ರಕರಣದಲ್ಲಿ ನಾಲ್ವರು ಷೇರುದಾರರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಂಗ್ರಾಳಿಯ ಭಾಗೋದಯ ಸೊಸೈಟಿಯಿಂದ ಸುಮಾರು 48.55 ಲಕ್ಷ ಹಣ ಪಡೆದು ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ಇದೆ ಎಂದು ತಿಳಿಸಿದರು.
ಇದಲ್ಲದೆ, ಆರೋಪಿಯು ತನ್ನ ಪತ್ನಿ, ತಂಗಿ, ತಮ್ಮ ಹಾಗೂ ತಮ್ಮನ ಪತ್ನಿಯ ಹೆಸರಿನಲ್ಲಿ ಸಂಘದಿಂದ ಸಾಲ ಮಂಜೂರು ಮಾಡಿಸಿಕೊಂಡು, ಅವರಿಗೆ ತಿಳಿಯದಂತೆ ಅವರ ಖಾತೆಗಳಿಂದ 71.42 ಲಕ್ಷ ಹಣವನ್ನು ಪಡೆದು ಸ್ವಂತಕ್ಕೆ ಬಳಸಿಕೊಂಡಿರುವುದು ದೂರಿನಲ್ಲಿ ತಿಳಿಸಿದ್ದಾರೆ. ಇಬ್ಬರು ಸದಸ್ಯರಿಂದ ಸಾಲದ ಕಂತುಗಳನ್ನು ಸಂಘದ ಖಾತೆಗೆ ಜಮಾ ಮಾಡುವುದಾಗಿ ಹೇಳಿ 1.22 ಲಕ್ಷ ಹಣವನ್ನು ಪಡೆದು ದುರ್ಬಳಕೆ ಮಾಡಿಕೊಂಡಿರುವುದಲ್ಲದೆ, ಸಂಘದ ಸಾಲದ ದಾಖಲೆಗಳನ್ನು ಅಡಮಾನ ಇಟ್ಟು ತನ್ನ ಹೆಸರಿನಲ್ಲಿ 15.99 ಲಕ್ಷ ಸಾಲ ಪಡೆದಿರುವ ಆರೋಪವೂ ಇದೆ ಎಂದು ಹೇಳಿದರು.
