ನಾಳೆ ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ರಾಜ್ಯ ಸರ್ಕಾರ ಅತ್ಯಂತ ಕಠಿಣ ಕ್ರಮ ಕೈಗೊಂಡಿದೆ. ಕರ್ನಾಟಕ ಸಾರ್ವಜನಿಕ ಪರೀಕ್ಷೆ ಅಧಿನಿಯಮ-2023ರ ಅಡಿಯಲ್ಲಿ ಪರೀಕ್ಷಾ ಅಕ್ರಮ ಎಸಗುವ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳಿಗೆ ಭಾರೀ ದಂಡ ಮತ್ತು ಜೈಲು ಶಿಕ್ಷೆಯ ಎಚ್ಚರಿಕೆ ನೀಡಲಾಗಿದೆ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಪೊಲೀಸ್ ಇಲಾಖೆ ಸಂಪೂರ್ಣ ಸಜ್ಜಾಗಿದೆ.

ದಿನಾಂಕ 02.08.2026 ರಂದು ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯನ್ನು ಭ್ರಷ್ಟಾಚಾರಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಸರ್ಕಾರ ‘ಕರ್ನಾಟಕ ಸಾರ್ವಜನಿಕ ಪರೀಕ್ಷೆ ಅಧಿನಿಯಮ 2023’ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಈ ಕಾಯ್ದೆಯಡಿ ಪರೀಕ್ಷೆಯಲ್ಲಿ ನಕಲು ಹೊಡೆಯುವುದು, ಪ್ರಶ್ನೆಪತ್ರಿಕೆ ಸೋರಿಕೆ, ಎಲೆಕ್ಟ್ರಾನಿಕ್ ಸಾಧನ ಬಳಸುವುದು ಅಥವಾ ಬದಲಿ ಅಭ್ಯರ್ಥಿಗಳನ್ನು ಕೂರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಕ್ರಮದಲ್ಲಿ ಭಾಗಿಯಾಗುವ ಅಭ್ಯರ್ಥಿಗಳಿಗೆ ಗರಿಷ್ಠ 5 ವರ್ಷ ಜೈಲು ಮತ್ತು ಕನಿಷ್ಠ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇನ್ನು ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಸಂಘಟಿತ ಅಕ್ರಮ ಎಸಗುವ ಮಧ್ಯವರ್ತಿಗಳಿಗೆ 8 ರಿಂದ 12 ವರ್ಷಗಳ ಜೈಲು ಶಿಕ್ಷೆ ಹಾಗೂ 15 ಲಕ್ಷದಿಂದ 10 ಕೋಟಿ ರೂ.ವರೆಗೆ ಭಾರಿ ದಂಡದ ಜತೆಗೆ ಆಸ್ತಿ ಜಪ್ತಿ ಮಾಡುವ ಅವಕಾಶವಿದೆ. ಈ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳು ಜಾಮೀನು ರಹಿತ (Non-bailable) ಹಾಗೂ ಸಂಜ್ಞೇಯ (Cognizable) ಅಪರಾಧಗಳಾಗಿದ್ದು, ಸಾರ್ವಜನಿಕರು ಹಾಗೂ ಅಭ್ಯರ್ಥಿಗಳು ಯಾವುದೇ ಅಕ್ರಮಗಳಿಗೆ ಕಿವಿಗೊಡದೆ ಮಾಹಿತಿ ಇದ್ದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ತಿಳಿಸಲು ಕೋರಲಾಗಿದೆ.
